ಮೈಸೂರು: ಜು.30 ರಂದು ರಾಕೇಶ್ ಸಿದ್ದರಾಮಯ್ಯ ಪುಣ್ಯಸ್ಮರಣೆ, ವಿಚಾರ ಸಂಕಿರಣ
ಮೈಸೂರು,ಜು.28: ದಿ.ರಾಕೇಶ್ ಸಿದ್ದರಾಮಯ್ಯನವರ ಎರಡನೇ ಪುಣ್ಯಸ್ಮರಣೆ ಅಂಗವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ವಿಚಾರ ಸಂಕಿರಣ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಬುಡಕಟ್ಟು ಮೂಲನಿವಾಸಿಗಳ ಒಕ್ಕೂಟದ ಉದ್ಘಾಟನೆಯನ್ನು ಜು.30ರಂದು ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ಅಂದು ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಲನೆ ನೀಡುವರು. ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರು 'ಸಾಮಾಜಿಕ ನ್ಯಾಯದ ಸೋಲು ಗೆಲುವುಗಳು ವಿಚಾರವಾಗಿ', ಮತ್ತು 'ಸಾಮಾಜಿಕ ನ್ಯಾಯ-ಹೋರಾಟಗಳು-ಆಪತ್ತುಗಳು' ಕುರಿತು ಪ್ರಗತಿಪರ ಚಿಂತಕ ಬೆಂಗಳೂರಿನ ಇಂದೂದರ್ ಹೊನ್ನಾಪುರ ರವರು ಉಪನ್ಯಾಸ ನೀಡುವರು ಎಂದರು.
ಪ್ರೊ.ಮಹೇಶ್ಚಂದ್ರಗುರು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಝಮೀರ್ ಅಹ್ಮದ್ ಖಾನ್, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ (ನಿವೃತ್ತ) ಎಂ.ರಾಮಯ್ಯ ಮತ್ತಿತರರು ಭಾಗಿಯಾಗುವರು ಎಂದು ತಿಳಿಸಿದರು.
ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಆಡಳಿತ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸಾಮಾಜಿಕ ಸಿದ್ಧಾಂತ ಮತ್ತು ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದ ಅವರು, ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನಾಯಕರು ಎದುರಿಸುವ ಅಡ್ಡಿ ಆತಂಕಗಳ ಬಗ್ಗೆ ಹಿಂದುಳಿದ ವರ್ಗಗಳು ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಗ್ರಾಮಾಂತರ ಅಧ್ಯಕ್ಷ ಜಾಕೀರ್ ಹುಸೇನ್, ಕೆಪಿಸಿಸಿ ನಗರ ಕಾರ್ಯದರ್ಶಿ ಡೈರಿ ವೆಂಕಟೇಶ್ ಗೋಷ್ಠಿಯಲ್ಲಿ ಇದ್ದರು.







