ಗೌರಿ ಲಂಕೇಶ್ ಹತ್ಯೆ ಪ್ರಕರಣ: ದ.ಕ ಜಿಲ್ಲೆಯ ನಾಲ್ವರಿಗೆ ನೋಟಿಸ್

ಬೆಂಗಳೂರು, ಜು.28: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರಿಗೆ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳು ನೋಟಿಸ್ ನೀಡಿ, ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೋಹನ್ ಚಾಂತಳ, ಯತೀಶ್ ಮೊಗ್ರ, ಯತೀನ್ ಅಂಬೆಕಲ್ಲು ಹಾಗೂ ಕುಮುದಾಕ್ಷ ಜಾಲ ಎಂಬುವರಿಗೆ ಸಿಟ್ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಮನೆ ಬಾಡಿಗೆ: ಬಂಧಿತ ಆರೋಪಿಗಳ ವಿಚಾರಣೆಯನ್ನು ತೀವ್ರಗೊಳಿಸಿರುವ ಸಿಟ್ ತನಿಖೆಯಲ್ಲಿ ಆರೋಪಿಗಳು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಲ್ಲಿಯ ಎಸಿಬಿ ಎಸ್ಸೈ ಒಬ್ಬರ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದರು ಎನ್ನುವ ಮಾಹಿತಿ ಹೊರಬಂದಿದೆ ಎಂದು ಹೇಳಲಾಗುತ್ತಿದೆ.
ಬಂಧಿತರಲ್ಲಿ ಇಬ್ಬರು ಸುರೇಶ್ ಎಂಬಾತನ ಹೆಸರಿನಲ್ಲಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಪೊಲೀಸ್ ಎಸ್ಸೈ ಮನೆಯಲ್ಲಿಯೇ ಕುಳಿತು ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಕರಾವಳಿ ಮೂಲದ ಮೋಹನ್ ನಾಯಕ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿ ಆತನ ಹೇಳಿಕೆ ಆಧರಿಸಿ ಹುಬ್ಬಳ್ಳಿ ಮೂಲದ ಇಬ್ಬರು ಮತ್ತು ಮಡಿಕೇರಿ ಮೂಲದ ಓರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮೋಲ್ ಕಾಳೆ ಹಲವು ಮಾಹಿತಿ ಬಹಿರಂಗ ಮಾಡಿದ್ದು, ಸುಜಿತ್ ಎಂಬಾತ ಹಿಂದುತ್ವಪರ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದ ಯುವಕರ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ಪರಿಚಯಿಸಿಕೊಂಡಿದ್ದನು. ತದನಂತರ ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದ ಯುವಕರನ್ನು ಸುಜಿತ್ ಆಯ್ಕೆ ಮಾಡಿಕೊಳ್ಳುತ್ತಿದ್ದನು ಎಂದು ವರದಿಯಾಗಿದೆ.







