ಬೆಳ್ತಂಗಡಿ: ಅಕ್ರಮ ದನದ ಮಾಂಸ ಸಾಗಾಟ: ಇಬ್ಬರು ಸೆರೆ
ಬೆಳ್ತಂಗಡಿ, ಜು. 28: ಅಕ್ರಮವಾಗಿ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೋಲೀಸರು ಪತ್ತೆ ಹಚ್ಚಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ವಾಹನ ಹಾಗೂ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಇಂದಬೆಟ್ಟು ಗ್ರಾಮದ ಪಾಲೆದೊಟ್ಟು ನಿವಾಸಿ ಅಂತೋಣಿ ಯಾನೆ ಶಿಜು(48) ಹಾಗೂ ಅದೇ ಗ್ರಾಮದ ಅಗ್ಗೊಟ್ಟು ಮನೆ ನಿವಾಸಿ ವರ್ಗೀಸ್ ಯಾನೆ ಶಜಿ (38) ಎಂಬವರಾಗಿದ್ದಾರೆ. ಇವರೊಂದಿಗಿದ್ದ ಆರೀಫ್ ಹಾಗೂ ಸಬೀತ್ ಎಂಬವರು ಪೋಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಶನಿವಾರ ಬೆಳಗ್ಗಿನ ಜಾವ ಕಿಲ್ಲೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಇಕೋ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬೆಳ್ತಂಗಡಿ ಎ.ಎಸ್.ಐ ಕಲೈಮಾರ್ ಹಾಗೂ ತಂಡದವರು ಇಂದಬೆಟ್ಟು ಚರ್ಚ್ ಸಮೀಪ ವಾಹನವನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಇದ್ದ ಇಬ್ಬರು ಪರಾರಿಯಾದರು ಇನ್ನಿಬ್ಬರನ್ನು ಪೋಲೀಸರು ಬಂಧಿಸಿದ್ದಾರೆ. ವಾಹನದಲ್ಲಿ ಇದ್ದ ಸುಮಾರು ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.







