ಪುಸ್ತಕ ಓದುವುದು ಜ್ಞಾನವೃದ್ಧಿಗೆ ಒಳ್ಳೆಯದು: ಶಾಸಕ ಡಾ.ಕೆ.ಅನ್ನದಾನಿ
ಮಳವಳ್ಳಿ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮಂಡ್ಯ, ಜು.28: ಪುಸ್ತಕ ಓದುವುದು ಜ್ಞಾನ ವೃದ್ದಿಗೆ ಒಳ್ಳೆಯದು. ಮಕ್ಕಳು ಪುಸ್ತಕ ಓದುವ ಅಭ್ಯಾಸವನ್ನು ಬೆಳಸಿಕೊಳ್ಳಬೇಕು. ಪುಸ್ತಕವನ್ನು ಓದುವುದರಿಂದ ಭಾಷೆಯ ಮೇಲೆ ಹಿಡಿತ ಸಾಧಿಸಬಹುದು ಎಂದು ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದ್ದಾರೆ.
ಮಳವಳ್ಳಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಮಳವಳ್ಳಿ ತಾಲೂಕಿನ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊಬೈಲ್‍ಗೆ ಮಕ್ಕಳು ಹೆಚ್ಚಾಗಿ ಆಕರ್ಷಿತರಾಗಿರುವುದರಿಂದ, ಪುಸ್ತಕವನ್ನು ಓದುವುದರನ್ನು ಮರೆತು ಬಿಟ್ಟಿದ್ದಾರೆ. ಜ್ಞಾನಾರ್ಜನೆಗೆ ದಿನದಲ್ಲಿ ಕನಿಷ್ಠ 10 ರಿಂದ 15 ಪುಟವನ್ನು ಓದುವ ಅಭ್ಯಾಸವನ್ನು ಮಕ್ಕಳು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ನಾಡುನುಡಿ, ಸಂಸ್ಕೃತಿ, ಕಲೆ ಉಳಿಯಬೇಕಾದರೆ, ಕರುನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಹೆಮ್ಮೆಯಿಂದ ಮಾತಾಡುವ ಮೂಲಕ ಭಾಷೆಯ ಮೇಲಿನ ಅಭಿಮಾನವನ್ನು ತೋರಬೇಕು ಎಂದು ಅವರು ಕರೆ ನೀಡಿದರು.
ಕನ್ನಡಿಗರು ಶಾಂತಿಪ್ರಿಯರು ಹಾಗೂ ಕರುಣೆಯನ್ನು ಮನಸು ಹೃದಯದಲ್ಲಿ ತುಂಬುಕೊಂಡಿರುವರು. ಕನ್ನಡ ನಾಡುನುಡಿಯ ವಿಷಯದಲ್ಲಿ ಯಾರಿಗೂ ಹೆದರದ ಕನ್ನಡಿಗರು ಹುಟ್ಟು ಹೋರಾಟಗಾರರು ಎಂದರು. ಕನ್ನಡಿಗರ ಭಾಷೆಯ ಮೇಲಿನ ಜ್ಞಾನ ಮೆಚ್ಚುವಂತಹುದು ಎಂದು ಅವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಒಂದು ಭಾಷೆಯ 8 ಕವಿ, ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವ ಉದಾಹರಣೆಗಳೇ ಇಲ್ಲ. ಕನ್ನಡ ಭಾಷೆಗೆ ಇತರೆ ಭಾಷೆಗಳಿಗಿಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡಿಗರು ಹೆಮ್ಮೆಪಡುವ ವಿಷಯ. ಇಂದಿಗೂ ಕನ್ನಡ ಭಾಷೆ ತನ್ನತನದ ಜತೆಗೆ ಸಂಸ್ಕೃತಿಯನ್ನು ಉಳಿಸಿಕೊಂಡು ಬರಲು ಅನೇಕ ಕವಿ ಸಾಹಿತಿಗಳ ಕೊಡುಗೆ ಅಪಾರ ಎಂದು ಅವರು ಹೇಳಿದರು.
ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ ಸಾಹಿತಿ ಮ.ಸಿ.ನಾರಾಯಣ, ತಾಲೂಕಿನಲ್ಲಿ ವಿಫಲವಾದ ಸಂಪತ್ತು ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಾಲೂಕನ್ನು ಕಟ್ಟುವ ಕಾಯಕ ಜನನಾಯಕರಿಂದ ಆಗಬೇಕಿದೆ ಎಂದರು.
ಗಗನಚುಕ್ಕಿ ಜಲಪಾತ, ಮುತ್ತತ್ತಿ, ಬಸವನಬೆಟ್ಟ ಸೇರಿದಂತೆ ತಾಲೂಕಿನಲ್ಲಿರುವ ಪ್ರವಾಸಿತಾಣಗಳು ಅಭಿವೃದ್ದಿಯಾಗಬೇಕು. ಮಳವಳ್ಳಿಗೆ ಬೆಂಗಳೂರು-ಮೈಸೂರು ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಸಮ್ಮೇಳನಾಧ್ಯಕ್ಷ ದಂಪತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಲೇಖಕಿ ಮಲ್ಲಿಕಾ ಮಳವಳ್ಳಿ ಸಮ್ಮೇಳನ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ಚಾಮಲಪುರ, ಮಳವಳ್ಳಿ ಪುರಸಭಾ ಅಧ್ಯಕ್ಷ ರಿಯಾಜ್, ತಹಶೀಲ್ದಾರ್ ದಿನೇಶ್‍ಚಂದ್ರ, ಡಿವೈಎಸ್ಪಿ ಮಲ್ಲಿಕ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.