ತುಮಕೂರು: ವೈದ್ಯಕೀಯ ಮಸೂದೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ

ತುಮಕೂರು,ಜು.28: ರಾಷ್ಟ್ರೀಯ ವೈದ್ಯಕೀಯ ಆಯೋಗದ ಹೆಸರಿನಲ್ಲಿ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವೈದ್ಯ ವಿಜ್ಞಾನ ವಿರೋಧಿ ಮಸೂದೆಯನ್ನು ಖಂಡಿಸಿ, ಶನಿವಾರ ಖಾಸಗಿ ಆಸ್ಪತ್ರೆಗಳ ವೈದ್ಯರು, ಐಎಂಎ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರದ ಎನ್.ಡಿ.ಎ ಸರಕಾರ ಸಂಸತ್ತಿನಲ್ಲಿ ಅನುಮೋದನೆ ದೊರೆಯದಿದ್ದರೂ ಜಾರಿಗೆ ತರಲು ಹೊರಟಿರುವ ಎನ್.ಎಂ.ಸಿ ಯಿಂದ ಇಡೀ ವೈದ್ಯಕೀಯ ವ್ಯವಸ್ಥೆಯೇ ಅಲ್ಲೋಲ, ಕಲ್ಲೋಲವಾಗಲಿದ್ದು, ಕೂಡಲೇ ಇದನ್ನು ಹಿಂಪಡೆಯಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕೇಂದ್ರ ಸರಕಾರ ಹೊರ ತರಲು ಹೊರಟಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ತಿದ್ದುಪಡಿ ಮಸೂದೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ತಜ್ಞ ವೈದ್ಯರ ಬದಲಿಗೆ ರಾಜಕಾರಣಿಗಳ ಕೂಪವಾಗಿ ಬದಲಾವಣೆಯಾಗಿಸುವ ಹುನ್ನಾರವನ್ನು ಕೇಂದ್ರ ಸರಕಾರ ರೂಪಿಸಿದೆ. ವೈದ್ಯಕೀಯ ಸಮೂಹದ ಮೂಲಭೂತ ಸೌಕರ್ಯಗಳನ್ನು ಕಸಿದುಕೊಂಡಿದೆ ಎಂದು ಪ್ರತಿಭಟನಾನಿರತ ವೈದ್ಯರು ಆರೋಪಿಸಿದರು.
ಪ್ರಜ್ಞಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರೆಯಬೇಕೆಂಬುದು ಸಂವಿಧಾನದ ಆಶಯವಾಗಿದೆ. ಇದಕ್ಕೆ ವಿರುದ್ದವಾಗಿ ಓಬಿಸಿ, ದಲಿತರು, ತಳ ಸಮುದಾಯಗಳನ್ನು ವೈದ್ಯಕೀಯ ಶಿಕ್ಷಣದಿಂದಲೇ ವಂಚಿಸುವ ಕೆಲಸ ನಡೆಯುತ್ತಿದೆ. ನೀಟ್(ಎನ್.ಇ.ಇ.ಟಿ) ಪರೀಕ್ಷೆ ಆರಂಭವಾದ ನಂತರ ಇಡೀ ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾದವರಲ್ಲಿ ಶೇ6ರಷ್ಟು ಓಬಿಸಿ, ಶೇ 1.09ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ0.62 ರಷ್ಟು ಪರಿಶಿಷ್ಟ ಪಂಗಡದವರು ಸೇರಿದ್ದು, ಬಡವರನ್ನು ವೈದ್ಯಕೀಯ ಶಿಕ್ಷಣದಿಂದ ದೂರವಿಟ್ಟು, ಹಣವಿರುವ ಶ್ರೀಮಂತರಿಗೆ ಮಣೆ ಹಾಕಲು ಮುಂದಾಗಿದೆ. ಇದುವರೆಗೂ ಇದ್ದ ಮ್ಯಾನೇಜ್‍ಮೆಂಟ್ ಕೋಟಾವನ್ನು ಶೇ15 ರಿಂದ ಶೇ50 ಕ್ಕೆ ಹೆಚ್ಚಿಸಲಾಗಿದೆ. ಇದರು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಪ್ರತಿಭಟನಾನಿರತ ವೈದ್ಯರು ದೂರಿದರು.
ಪ್ರತಿಭಟನೆಯಲ್ಲಿ ಐಎಂಎ ಪದಾಧಿಕಾರಿಗಳಾದ ವೈದ್ಯರಾದ ಮಹೇಶ್, ಭರತ್‍ರಾಜ್, ಸತ್ಯಾನಂದ, ಆಶ್ವಿನ್‍ಕುಮಾರ್, ಕಿರಣಕುಮಾರ್, ರವಿಶಂಕರ್, ಡಾ.ಪರಮೇಶ್ವರ್ ಮತ್ತಿತರರು ಭಾಗವಹಿಸಿದ್ದರು.
ರೋಗಿಗಳ ಚಿಕಿತ್ಸೆಯಲ್ಲಿ ಏರುಪೇರು: ಕೇಂದ್ರದ ಕರಾಳ ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಓಪಿಡಿ ರದ್ದು ಮಾಡಿ ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಬಿಡುವಿಲ್ಲದೆ ಕೆಲಸ ಮಾಡುವ ಮೂಲಕ ಸರಕಾರಿ ಆಸ್ಪತ್ರೆಯ ವೈದ್ಯರು, ಚಿಕಿತ್ಸೆಗೆ ಆಗಮಿಸಿದ ರೋಗಿಗಳಿಗೆ ಸೇವೆ ಸಲ್ಲಿಸಿದರು. ಖಾಸಗಿ ಆಸ್ಪತ್ರೆಗಳ ಮುಷ್ಕರಿಂದ ಸರಕಾರಿ ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಒಂದೇ ದಿನ 1500-2000 ರೋಗಿಗಳು ಆಗಮಿಸಿದ್ದು, ಇಡೀ ಆಸ್ಪತ್ರೆಯ ಆವರಣವೇ ರೋಗಿಗಳಿಂದ ತುಂಬಿ ಹೋಗಿತ್ತು.







