ತುಮಕೂರು: ಸರಕಾರಿ ಶಾಲೆಗಳ ಉಳಿವಿಗಾಗಿ ಸಮಾನ ಮಕ್ಕಳ ಮಂಟಪ ಧರಣಿ

ತುಮಕೂರು,ಜು.28: ಸಮಾನ ಮಕ್ಕಳ ಮಂಟಪದಿಂದ ಸರಕಾರಿ ಶಾಲೆಗಳನ್ನು ಉಳಿಸುವ ಮತ್ತು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಧರಣಿ ನಡೆಸುವ ಮೂಲಕ ತುಮಕೂರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ ಹೆಚ್ಚು ತಳ ಸಮುದಾಯಗಳಾದ ದಲಿತ, ಹಿಂದುಳಿದ ವರ್ಗ,ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಬಡಮಕ್ಕಳೇ ಹೆಚ್ಚು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಶಿಕ್ಷಣವು ಖಾಸಗೀಕರಣಗೊಂಡು ವ್ಯಾಪಾರದ ಹಾದಿ ಹಿಡಿದಿರುವುದರಿಂದ ಬಡ ಮಕ್ಕಳಿಗೆ ಶಿಕ್ಷಣವು ಗಗನ ಕುಸುಮವಾಗಿದೆ. ಇವುಗಳ ಮಧ್ಯೆ ಸರಕಾರಿ ಶಾಲೆಗಳ ಬಗ್ಗೆ ವ್ಯವಸ್ಥೆಯಲ್ಲಿ ತಾತ್ಸಾರ ಮತ್ತು ನಕರತ್ಮಾಕ ಮನೋಭಾವನೆಗಳಿಂದ ಸರಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚಿ ಬಡ ಮಕ್ಕಳ ಶಿಕ್ಷಣಕ್ಕೆ ಸಂಚಕಾರ ತರಲು ಹೊರಟಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸರಕಾರಿ ಶಾಲೆಗಳನ್ನು ಮುಚ್ಚುವುದರಿಂದ ದಲಿತ, ಹಿಂದುಳಿದ ಮತ್ತು ದಮನಿತ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಸರಕಾರಿ ಶಾಲೆಗಳ ಉಳಿವು ಮತ್ತು ಸಬಲೀಕರಣಕ್ಕೆ ಪೂರಕವಾಗಿರುವ ಅಂಶಗಳನ್ನೊಳಗೊಂಡಿರುವಂತಹ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವರದಿ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ನಗರ ಮಟ್ಟದ ಸಮಾನ ಮಕ್ಕಳ ಮಂಟಪದ ಅಧ್ಯಕ್ಷ ಪ್ರಥಮ್, ಉಪಾಧ್ಯಕ್ಷ ಗಾಯಿತ್ರಿ, ಕಾರ್ಯದರ್ಶಿ ಧನುಷ್, ವಿವಿಧ ಸ್ಲಂ ನ ಪದಾಧಿಕಾರಿಗಳಾದ ರಾಧ, ಸುಹಾಸ್, ಮಂಗಳಗೌರಿ, ಶಶಿಕಲಾ, ಶೃತಿ, ಸುನೀಲ್, ಕಾಂತರಾಜು, ಸ್ಪೂರ್ತಿ, ಬಾಲಾಜಿ ಹಾಗೂ ಕೋಳಗೇರಿ ಸಮಿತಿಯ ಶೆಟ್ಟಾಳಯ್ಯ,ಅರುಣ್, ರಘು, ಶೃತಿ, ಗಾಯಿತ್ರಿ, ಲತಾ ಮತ್ತಿತರರು ಪಾಲ್ಗೊಂಡಿದ್ದರು.







