ಅಕ್ರಮ ಮಲ್ಟಿಲೆವೆಲ್ ಮಾರ್ಕೆಟಿಂಗ್ ವ್ಯವಹಾರ: ಸಂಸ್ಥೆ ವಿರುದ್ಧ ಸ್ವಯಂ ದೂರು ದಾಖಲು
ಮಂಗಳೂರು, ಜು.28: ನಗರದ ಎಂಜಿ ರಸ್ತೆಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಅಕ್ರಮವಾಗಿ ಮಲ್ಟಿಲೆವೆಲ್ ಮಾರ್ಕೆಟಿಂಗ್ ವ್ಯವಹಾರ ನಡೆಸಿ, ಸಾರ್ವ ಜನಿಕರಿಗೆ ವಂಚಿಸುತ್ತಿದ್ದ ಸಂಸ್ಥೆಯ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಓನ್ ಬಿಝ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಹೆಸರಿನಲ್ಲಿ ಶಶಿಧರ್, ಆತನ ಪತ್ನಿ ವಿನುತಾ, ನಗರದ ರಝಾಕ್ ಹಾಗೂ ಕೇರಳದ ಕೆಲವರು ಈ ಪ್ರಕರಣದ ಪ್ರಮುಖ ಆರೋಪಿಗಳು. ಕಳೆದ ಹಲವು ತಿಂಗಳಿನಿಂದ ಈ ಸಂಸ್ಥೆ ವ್ಯವಹಾರ ನಡೆಸುತ್ತಿದೆ. ಒಬ್ಬ ವ್ಯಕ್ತಿಯಿಂದ 3 ಸಾವಿರ ರೂ. ಪಡೆದು ರಿಜಿಸ್ಟ್ರಾರ್ ಮಾಡುವುದಲ್ಲದೆ, ಈ ಲಿಂಕ್‌ಗೆ ಇನ್ನೊಬ್ಬ ಸದಸ್ಯನನ್ನು ಸೇರ್ಪಡೆ ಮಾಡಿದರೆ 5ಸಾವಿರ ರೂ. ನೀಡುವುದಾಗಿ ಆಮಿಷ ನೀಡುತ್ತಿದ್ದರು. ಹಣದ ಆಸೆಗೆ ಒಬ್ಬರಿಗೊಬ್ಬರನ್ನು ಸೇರ್ಪಡೆ ಚೈನ್ ಲಿಂಕ್ ಬೆಳೆಸುತ್ತಿದ್ದರು.
ಮಲ್ಟಿಲೆವೆಲ್ ಮಾರ್ಕೆಟಿಂಗ್ ವ್ಯವಹಾರ ಜಾಲದ ಬಗ್ಗೆ ಈಗಾಗಲೇ ಕೆಲವರು ಲಕ್ಷಾಂತರ ರೂ. ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸರಿಗೆ ಕೆಲವೊಂದು ಮೂಲಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಸಬ್‌ಇನ್‌ಸ್ಪೆಕ್ಟರ್ ಶ್ಯಾಮ್ ಸುಂದರ್ ಬಂದರು ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿದ್ದಾರೆ.
ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.





