ಅ.2ರಿಂದ ಒಡಿಶಾ ಆಹಾರ ಭದ್ರತಾ ಕಾಯ್ದೆ ಜಾರಿ: ನವೀನ್ ಪಟ್ನಾಯಕ್

ಭುವನೇಶ್ವರ, ಜು.28: ಈ ವರ್ಷದ ಅಕ್ಟೋಬರ್ 2ರಿಂದ ತನ್ನದೇ ಸ್ವಂತ ಆಹಾರ ಭದ್ರತಾ ಕಾಯ್ದೆಯನ್ನು ಒಡಿಶಾ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ(ಎನ್‌ಎಫ್‌ಎಸ್‌ಎ)ಯ ವ್ಯಾಪ್ತಿಗೆ ಒಳಪಡದ ಸುಮಾರು 34.44 ಲಕ್ಷ ಮಂದಿ ಈ ಕಾಯ್ದೆಯಡಿ ಬರುತ್ತಾರೆ ಎಂದು ಪಟ್ನಾಯಕ್ ತಿಳಿಸಿದ್ದಾರೆ.
ಭುವನೇಶ್ವರದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಮುಖ್ಯಮಂತ್ರಿ, ನಮ್ಮ ಸಮಸ್ಯೆಗಳು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ಸರಕಾರ ಯಾವತ್ತೂ ಬಡಜನರ ಆಹಾರ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದೆ. 2008ರಿಂದ ಕಿ.ಗ್ರಾಂ.ಗೆ 2ರೂ.ದರದಲ್ಲಿ ಅಕ್ಕಿ ಒದಗಿಸುತ್ತಿದ್ದೇವೆ. ಈ ಯೋಜನೆಯ ಯಶಸ್ಸಿನಿಂದ ಪ್ರೇರಿತಗೊಂಡು 2013ರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 1 ರೂ.ಗೆ 1 ಕಿ.ಗ್ರಾಂ. ಅಕ್ಕಿ ಪೂರೈಸುವ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ಆಹಾರ ಭದ್ರತೆಯತ್ತ ಕೈಗೊಂಡಿರುವ ಒಂದು ದೊಡ್ಡ ಹೆಜ್ಜೆ ಇದಾಗಿದೆ ಎಂದು ತಿಳಿಸಿದರು.
ಲಕ್ಷಾಂತರ ಬಡವರು ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಬಾರದೆ ಸೌಲಭ್ಯ ವಂಚಿತರಾಗಿರುವುದು 2011ರ ಗಣತಿಯಲ್ಲಿ ತಿಳಿದುಬಂದಿದೆ. 2011ರಿಂದ 2018ರ ವರೆಗಿನ ಅವಧಿಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಿದೆ ಎಂದ ಅವರು, ಗಾಂಧಿ ಜಯಂತಿಯಂದು ಜಾರಿಯಾಗಲಿರುವ ಒಡಿಶಾ ಕಾಯ್ದೆಯ ಬಳಿಕ ಒಬ್ಬನೇ ಒಬ್ಬ ಬಡ ವ್ಯಕ್ತಿ ತನ್ನ ಹಕ್ಕಿನಿಂದ ವಂಚಿತನಾಗಲಾರ ಎಂದು ತಿಳಿಸಿದ್ದಾರೆ. ಸೌಲಭ್ಯ ವಂಚಿತ ಬಡಜನರ ವಿಷಯವನ್ನು ಕೇಂದ್ರದ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿರುವ ಅವರು 34.44 ಲಕ್ಷ ಫಲಾನುಭವಿಗಳಿಗೆ ಒದಗಿಸಲು ಹೆಚ್ಚುವರಿ ಆಹಾರವನ್ನು ಒದಗಿಸುವಂತೆ ಪ್ರಧಾನಿಗೆ ಮನವಿ ಮಾಡಿದರು.







