ದಾವಣಗೆರೆ: ಎನ್ಎಂಸಿ ಕಾಯ್ದೆ ವಿರೋಧಿಸಿ ಜಿಲ್ಲಾದ್ಯಂತ ಖಾಸಗಿ ವೈದ್ಯರಿಂದ ಪ್ರತಿಭಟನೆ
ದಾವಣಗೆರೆ,ಜು.28: ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಮುಂದಾದ ಭಾರತೀಯ ವೈದ್ಯಕೀಯ ಪರಿಷತ್‍ನ ತಿದ್ದುಪಡಿ ವಿಧೇಯಕ ವಿರೋಧಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರ, ಜಿಲ್ಲಾದ್ಯಂತ ಖಾಸಗಿ ವೈದ್ಯರು ಹೊರ ರೋಗಿಗಳ ಸೇವೆ(ಓಪಿಡಿ) ಬಹಿಷ್ಕರಿಸುವ ಮೂಲಕ ನಗರದಲ್ಲಿ ಪ್ರತಿಭಟಿಸಿದರು.
ಭಾರತೀಯ ವೈದ್ಯ ಪರಿಷತ್ ಕಾಯ್ದೆ ವಿರೋಧಿಸಿ ಪ್ರಯೋಗಾಲಯ ಸೇವೆ, ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ, ಖಾಸಗಿ ಕ್ಲಿನಿಕ್‍ಗಳ ಸೇವೆಯನ್ನು ಸ್ಥಗಿತಗೊಳಿಸಿ ಐಎಂಎ ನೇತೃತ್ವದಲ್ಲಿ ಖಾಸಗಿ ವೈದ್ಯರು ನಗರದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವು ಭಾರತೀಯ ವೈದ್ಯ ಪರಿಷತ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದನ್ನು ವಿರೋಧಿಸಿ ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವೈದ್ಯ ಡಾ.ಬಿ.ಎಸ್.ನಾಗಪ್ರಕಾಶ, ವೈದ್ಯ ಪರಿಷತ್ ಕಾಯ್ದೆ ತಿದ್ದುಪಡಿ ವಿಧೇಯಕ ವಿರೋಧಿಸಿ ದೇಶವ್ಯಾಪಿಯಾಗಿ ಶನಿವಾರ ಹೋರಾಟ ನಡೆಸಿದ್ದು, ಮಾರಕವಾದ ಇಂತಹ ವಿಧೇಯಕವನ್ನು ಕೇಂದ್ರ ಕೈಬಿಡಬೇಕು. 2016ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ ಕಾಯ್ದೆಗೆ ಕೆಲ ತಿದ್ದುಪಡಿ ತರಲು ವಿಧೇಯಕ ಮಂಡಿಸಿದ್ದು, ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಲಾಗುತ್ತಿದೆ ಎಂದರು.
ತಿದ್ದುಪಡಿಯಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಲಿದೆ. ವೈದ್ಯಕೀಯ ಶಿಕ್ಷಣದಲ್ಲಿ ರಾಜ್ಯಗಳು ಅಧಿಕಾರ ಕಳೆದುಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ತಿದ್ದುಪಡಿ ಬಗ್ಗೆ ಪುನರ್ ಪರಿಶೀಲಿಸುವಂತೆ ಭಾರತೀಯ ವೈದ್ಯಕೀಯ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಹಿಂದೆಯೇ ಒತ್ತಾಯಿಸಿತ್ತು. ಆದರೆ, ಯಾವುದೇ ಪರಿಷ್ಕರಣೆ ಇಲ್ಲದೇ ತಿದ್ದುಪಡಿ ವಿಧೇಯಕ ಮಂಡನೆಗೆ ಸಿದ್ಧತೆ ನಡೆಸಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಕರೆಯ ಮೇರೆಗೆ ನಗರ, ಜಿಲ್ಲಾದ್ಯಂತ ಓಪಿಡಿ ಸೇವೆ ಬಂದ್ ಮಾಡಿ, ಮುಷ್ಕರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದೇಶಾದ್ಯಂತ ಸುಮಾರು 2.5 ಲಕ್ಷ ವೈದ್ಯರು ಭಾರತೀಯ ವೈದ್ಯಕೀಯ ಸಂಸ್ಥೆ ಸದಸ್ಯರಾಗಿದ್ದಾರೆ. ಈ ಪೈಕಿ ರಾಜ್ಯದಲ್ಲಿ27 ಸಾವಿರ ವೈದ್ಯರಿದ್ದು, ಈ ಎಲ್ಲರೂ ಓಪಿಡಿ ಬಂದ್ ಹೋರಾಟಕ್ಕೆ ಬೆಂಬಲಿಸಿದ್ದಾರೆ. ಉದ್ದೇಶಿತ ತಿದ್ದುಪಡಿ ವಿಧೇಯಕವು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಸಂಚಕಾರ ತರಲಿದೆ.
ಹಿರಿಯ ವೈದ್ಯರಾದ ಡಾ.ಸುಬ್ಬರಾವ್, ಡಾ.ಎ.ಎಂ.ಶಿವಕುಮಾರ, ಐಎಂಎ ಅಧ್ಯಕ್ಷ ಡಾ.ಜಿ.ಸಿ.ಇಡಗುಂಜಿ, ಪ್ರಧಾನ ಕಾರ್ಯದರ್ಶಿ ಪ್ರವೀಣ ಎಂ.ಅಣ್ವೇಕರ್, ಡಾ.ದಿನೇಶ್ ಎಲ್.ಜಾಧವ್ ಸೇರಿದಂತೆ ಹಿರಿಯ, ಕಿರಿಯ ವೈದ್ಯರು ಇದ್ದರು.
ಇದೇ ವೇಳೆ ಐಎಂಎ ಪದಾಧಿಕಾರಿಗಳು, ಹಿರಿಯ ವೈದ್ಯರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.