ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಗೆಲುವಿಗೆ ಪ್ರತಿಕ್ರಿಯಿಸಿದ ಭಾರತ

ಹೊಸದಿಲ್ಲಿ, ಜು.28: ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕೆ ಇನ್ಸಾಫ್ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬಗ್ಗೆ ಇದೇ ಮೊದಲ ಬಾರಿ ನೀಡಿರುವ ಪ್ರತಿಕ್ರಿಯೆಲ್ಲಿ ಭಾರತ, ಪಾಕಿಸ್ತಾನದ ನೂತನ ಸರಕಾರ ಭಯೋತ್ಪಾದನೆ ಮತ್ತು ಹಿಂಸೆಯಿಂದ ಮುಕ್ತವಾಗಿರುವ ಸುರಕ್ಷಿತ, ಸ್ಥಿರ, ಭದ್ರ ಹಾಗೂ ಅಭಿವೃದ್ಧಿ ಹೊಂದಿದ ದಕ್ಷಿಣ ಏಶ್ಯಾವನ್ನು ನಿರ್ಮಿಸಲು ಕೈಜೋಡಿಸಲಿದೆ ಎಂದು ನಂಬಿರುವುದಾಗಿ ತಿಳಿಸಿದೆ. ಪಾಕಿಸ್ತಾನ ಚುನಾವಣೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ, ಪಾಕಿಸ್ತಾನದ ಜನರು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿರಿಸಿದ್ದಾರೆ ಎಂಬುದನ್ನು ಸಾರ್ವತ್ರಿಕ ಚುನಾವಣೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.
ಚುನಾವಣೆಯ ಎಲ್ಲ ಫಲಿತಾಂಶಗಳು ಘೋಷಣೆಯಾಗುವುದಕ್ಕೂ ಮುನ್ನ ಗೆಲುವಿನ ಭಾಷಣ ಮಾಡಿದ್ದ ಇಮ್ರಾನ್ ಖಾನ್ ಭಾರತದ ಜೊತೆ ಸಂಬಂಧ ಸುಧಾರಿಸುವ ಬಗ್ಗೆ ಮಾತನಾಡಿದ್ದರು. “ನಮ್ಮ ಸಂಬಂಧವನ್ನು ಸರಿಪಡಿಸಲು ನಾನು ಬಯಸುತ್ತೇನೆ. ಅವರು ಒಂದು ಹೆಜ್ಜೆ ನಮ್ಮತ್ತ ಇಟ್ಟರೆ, ನಾವು ಅವರತ್ತ ಎರಡು ಹೆಜ್ಜೆಗಳನ್ನು ಇಡುತ್ತೇವೆ. ಆದರೆ ಕನಿಷ್ಟ ನಮಗೆ ಆರಂಭವೊಂದು ಸಿಗಬೇಕು” ಎಂದು ಖಾನ್ ತಿಳಿಸಿದ್ದರು. ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕಳೆಗುಂದುತ್ತಾ ಸಾಗಿದೆ. ಪಾಕಿಸ್ತಾನಿ ಮೂಲದ ಉಗ್ರರು ಭಾರತದ ಸೇನಾನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಈ ಸಂಬಂಧ ಮತ್ತಷ್ಟು ಹಳಸಿದೆ. ಎರಡು ದೇಶಗಳ ಮಧ್ಯೆ ಯಾವುದೇ ಅರ್ಥಪೂರ್ಣ ಮಾತುಕತೆಗೂ ಮೊದಲು ಪಾಕಿಸ್ತಾನ ತನ್ನ ನೆಲದಿಂದ ನಡೆಸಲಾಗುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಬೇಕೆಂದು ಭಾರತ ಹೇಳುತ್ತಲೇ ಬಂದಿದೆ.
ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬರುವ ಪಕ್ಷವು ಉಗ್ರವಾದಕ್ಕೆ ಬೆಂಬಲ ನೀಡುವಂತಿದ್ದರೆ ಜಮ್ಮು ಮತ್ತು ಕಾಶ್ಮೀರದ ಮತ್ತು ಇಡೀ ದೇಶದ ಜನರ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣದಿಂದ ಭಾರತ ಪಾಕಿಸ್ತಾನದ ಚುನಾವಣೆಯ ಫಲಿತಾಂಶವನ್ನು ಗಮನಿಸುತ್ತಿತ್ತು.







