ಚಿಕ್ಕಮಗಳೂರು: ಅತಿವೃಷ್ಟಿ ಪರಿಹಾರ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಅತಿವೃಷ್ಟಿ ಪ್ರಗತಿ ಪರಿಶೀಲನೆ ಸಭೆ

ಚಿಕ್ಕಮಗಳೂರು, ಜು.28: ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಹಾಗೂ ಮನೆಗಳಿಗೆ ಹಾನಿಯಾಗಿದ್ದು, ತ್ವರಿತಗತಿಯಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮಳೆ ಬೆಳೆ ಪರಿಸ್ಥಿತಿ, ಮಳೆ ಹಾನಿ ಬಗ್ಗೆ ಕೈಗೊಂಡ ಪರಿಹಾರ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪಹಾಗೂ ನರಸಿಂಹರಾಜಪುರ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಈ ಪ್ರದೇಶದಲ್ಲಿ ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಮನೆಗಳಿಗೆ ಹಾನಿಯಾಗಿರುವುದಲ್ಲದೆ ಬೆಳೆಯೂ ಹಾನಿಗೊಳಗಾಗಿದೆ. ಹಾಳಾಗಿರುವ ರಸ್ತೆ, ಸೇತುವೆಗಳ ದುರಸ್ತಿಗೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1,50,560 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಪ್ರಸ್ತುತ 59,722 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದು ಶೇ.39.7 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಕಡೂರು ತಾಲೂಕಿನಲ್ಲಿ ವಾಡಿಕೆ ಮಳೆಯಾಗಿದ್ದು, ಬಿತ್ತನೆ ಕಾರ್ಯ ನಡೆಯುತ್ತಿದೆ. ಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದ್ದು, ಬಿತ್ತನೆ ಕಾರ್ಯ ಆಗಬೇಕಾಗಿದ್ದು ಆಗಸ್ಟ್ ಮಾಹೆಯ ಅಂತ್ಯದವರೆಗೂ ಮುಂಗಾರು ಬಿತ್ತನೆ ನಡೆಯಲಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿದ್ದು ಯಾವುದೇ ಕೊರತೆ ಇಲ್ಲ ಎಂದರು.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಜಿಲ್ಲೆಯಲ್ಲಿ 35ಕ್ಕೂ ಹೆಚ್ಚಿನ ಪಕ್ಕಾಮನೆಗಳಿಗೆ ಹಾನಿಯುಂಟಾಗಿದ್ದು, 4,23,018 ರೂ. ಪರಿಹಾರ ಧನ ಪಾವತಿಸಲಾಗಿದೆ. 146 ಕಚ್ಚಾ ಮನೆಗಳು ಹಾನಿಗೊಳಗಾಗಿದ್ದು, ಇದರಲ್ಲಿ 129 ಪ್ರಕರಣಗಳಿಗೆ 26,24,154 ರೂ. ಪರಿಹಾರವನ್ನು ಪಾವತಿಸಲಾಗಿದೆ. 17 ಪ್ರಕರಣಗಳು ಬಾಕಿ ಇವೆ. ಅಲ್ಲದೆ, 9 ಜಾನುವಾರುಗಳು ಮರಣ ಹೊಂದಿದ್ದು 1,73,000 ರೂ. ಪರಿಹಾರ ಧನ ವಿತರಿಸಲಾಗಿದ್ದು, ಹಾನಿಗೊಳಗಾದ ಸಾರ್ವಜನಿಕ ಸೊತ್ತುಗಳಳ ಬಗ್ಗೆ ಆಯಾ ಇಲಾಖಾವಾರು ಮಾಹಿತಿ ಸಂಗ್ರಹಿಸಲಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 9 ರೈತರ ಆತ್ಮಹತ್ಯಾ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 1 ತಿರಸ್ಕೃತ ಗೊಂಡಿದೆ. 8 ಪ್ರಕರಣಗಳ ಪೈಕಿ 1ಕ್ಕೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. 5 ಪ್ರಕರಣಗಳು ಪರಿಹಾರ ವಿತರಣೆಗೆ ಬಾಕಿ ಇವೆ. ಇತ್ಯರ್ಥಕ್ಕೆ 2 ಪ್ರಕರಣಗಳು ಬಾಕಿ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಕಾಲ ಯೋಜನೆಯಡಿ ಬರುವ ಮಾಹಿತಿಗಾಗಿ ಬರುವ ಅರ್ಜಿಗಳನ್ನು ವಿಳಂಬ ಮಾಡದೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡದ ನಿರ್ವಾಹಕರ ವಿರುದ್ಧ ಮೇಲಧಿಕಾರಿಗಳು ಕ್ರಮ ವಹಿಸಬೇಕು. ಅಧಿಕಾರಿಗಳು ಗಮನಿಸದೆ ಇದ್ದ ಪಕ್ಷದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗ ಕ್ರಮ ಜರುಗಿಸಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಮಳೆಯಿಂದ ಬಾಬಾ ಬುಡಾನ್ ಗಿರಿಯ ಕವಿಕಲ್ ಗುಂಡಿಯಲ್ಲಿ ಹಾಳಾಗಿರುವ ರಸ್ತೆಯನ್ನು ಉಸ್ತುವಾರಿ ಕಾರ್ಯದರ್ಶಿ ಪರಿಶೀಲಿಸಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಶೀಘ್ರ ದುರಸ್ತಿ ಪಡಿಸುವಂತೆ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸಿ.ಸತ್ಯಭಾಮ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.







