ಧವನ್, ಪೂಜಾರ ಕಳಪೆ ಪ್ರದರ್ಶನ: ಕೊಹ್ಲಿಗೆ ತಲೆನೋವು

ಹೊಸದಿಲ್ಲಿ, ಜು.28: ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಮೊದಲ ಟೆಸ್ಟ್‌ಗೆ ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಟೀಮ್ ಇಂಡಿಯಾದ ಚಿಂತಕರ-ಚಾವಡಿಯಲ್ಲಿ ಶಿಖರ್ ಧವನ್ ಹಾಗೂ ಚೇತೇಶ್ವರ ಪೂಜಾರ ಅವರ ಕಳಪೆ ಫಾರ್ಮ್‌ನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.
ಈಗಾಗಲೇ ಪ್ರಮುಖ ವೇಗದ ಬೌಲರ್‌ಗಳ ಸೇವೆಯಿಂದ ವಂಚಿತವಾಗಿರುವ ಭಾರತಕ್ಕೆ ಟೆಸ್ಟ್ ಸರಣಿ ಆರಂಭಕ್ಕೆ ಮೊದಲೇ ಅಗ್ರ ಕ್ರಮಾಂಕದ ದಾಂಡಿಗರ ವೈಫಲ್ಯವು ಚಿಂತೆಯ ವಿಷಯವಾಗಿದೆ. ಆರಂಭಿಕ ಆಟಗಾರ ಧವನ್ ಎಸೆಕ್ಸ್ ವಿರುದ್ಧ ಆಡಿದ ತ್ರಿದಿನ ಅಭ್ಯಾಸ ಪಂದ್ಯದ ಎರಡೂ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 23 ರನ್ ಗಳಿಸಿದ್ದರೆ, ಎರಡನೇ ಇನಿಂಗ್ಸ್ ನಲ್ಲಿ ಕೇವಲ 1 ರನ್ ಗಳಿಸಿ ಔಟಾಗಿದ್ದರು.
ಧವನ್ ಟ್ವೆಂಟಿ-20 ಸರಣಿಯಲ್ಲಿ 4, 10 ಹಾಗೂ 5 ರನ್ ಗಳಿಸಿ ಇಂಗ್ಲೆಂಡ್ ಪ್ರವಾಸ ಆರಂಭಿಸಿದ್ದಾರೆ. ಆದಾಗ್ಯೂ 32ರ ಹರೆಯದ ಧವನ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 40,36 ಹಾಗೂ 44 ರನ್ ಗಳಿಸಿದ್ದಾರೆ. ಧವನ್ ಅಭ್ಯಾಸ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ನಲ್ಲಿ ಖಾತೆ ತೆರೆಯಲು ವಿಫಲವಾಗಿರುವುದು ವಿಭಿನ್ನ ವಾತಾವರಣ ಹಾಗೂ ಪಿಚ್‌ಗೆ ಹೊಂದಿಕೊಳ್ಳಲು ಪರದಾಟ ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಭಾರತದ ಮೂರನೇ ಕ್ರಮಾಂಕದ ದಾಂಡಿಗ ಪೂಜಾರ ಕಳೆದ ಒಂದು ತಿಂಗಳಿಂದ ರನ್ ಬರ ಎದುರಿಸುತ್ತಿದ್ದಾರೆ. ಕೌಂಟಿ ಕ್ರಿಕೆಟ್ ಆಡಲು ಇಂಗ್ಲೆಂಡ್‌ಗೆ ಈ ಮೊದಲೇ ತೆರಳಿರುವ ಪೂಜಾರ ಯಾರ್ಕ್‌ಶೈರ್ ಪರ ಆಡಿರುವ ಎರಡು ಪ್ರಥಮ ದರ್ಜೆ ಪಂದ್ಯಗಳಲ್ಲಿ 0, 32, 23 ಹಾಗೂ 17 ರನ್ ಗಳಿಸಿದ್ದಾರೆ.







