ಮಹಿಳಾ ಹಾಕಿ ವಿಶ್ವಕಪ್: ಇಂದು ಭಾರತಕ್ಕೆ ಮಾಡು-ಮಡಿ ಪಂದ್ಯ

ಲಂಡನ್, ಜು.28: ಮಹಿಳಾ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕೆಳ ರ್ಯಾಂಕಿನ ಐರ್ಲೆಂಡ್ ವಿರುದ್ಧ 0-1 ಅಂತರದಿಂದ ಸೋತಿರುವ ಭಾರತದ ಮಹಿಳಾ ಹಾಕಿ ತಂಡ ಗ್ರೂಪ್ ಹಂತದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ 1ರಲ್ಲಿ ಡ್ರಾ, ಮತ್ತೊಂದರಲ್ಲಿ ಸೋಲು ಕಂಡಿದೆ. ಹೀಗಾಗಿ ಅಮೆರಿಕ ವಿರುದ್ಧ ರವಿವಾರ ನಡೆಯುವ ಮೂರನೇ ಗ್ರೂಪ್ ಪಂದ್ಯ ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಭಾರತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲೀ ವ್ಯಾಲಿ ಹಾಕಿ ಸೆಂಟರ್‌ನಲ್ಲಿ ರವಿವಾರ ನಡೆಯುವ ಪಂದ್ಯದಲ್ಲಿ ಏಳನೇ ರ್ಯಾಂಕಿನ ಅಮೆರಿಕ ತಂಡದ ವಿರುದ್ಧ ಮಾಡು-ಮಡಿ ಪಂದ್ಯವನ್ನಾಡಲಿದೆ.
ರಾಣಿ ರಾಂಪಾಲ್ ನೇತೃತ್ವದ ಭಾರತದ ಮಹಿಳಾ ಹಾಕಿ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ವಿಶ್ವದ ನಂ.2ನೇ ತಂಡ ಇಂಗ್ಲೆಂಡ್ ವಿರುದ್ಧ 1-1 ರಿಂದ ಡ್ರಾ ಸಾಧಿಸಿ ಸ್ಫೂರ್ತಿಯುತ ಆರಂಭ ಪಡೆದಿತ್ತು. ಆದರೆ, ಐರ್ಲೆಂಡ್ ವಿರುದ್ಧ ಆಡಿರುವ ತನ್ನ 2ನೇ ಗ್ರೂಪ್ ಪಂದ್ಯದಲ್ಲಿ ಹಲವು ಅವಕಾಶಗಳನ್ನು ಕೈಚೆಲ್ಲಿದ ಭಾರತ ಪಂದ್ಯವನ್ನು ಕಳೆದುಕೊಂಡಿತು.
ಇದೀಗ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿರುವ ಭಾರತ ತಂಡ ಅಮೆರಿಕ ವಿರುದ್ಧ ತಪ್ಪನ್ನು ಪುನರಾವರ್ತಿಸದೇ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
‘‘ಅಮೆರಿಕ ವಿರುದ್ಧ ಪಂದ್ಯದಲ್ಲಿ ರಕ್ಷಣಾ ವಲಯ ನಮ್ಮ ಮುಖ್ಯ ಅಸ್ತ್ರವಾಗಿದೆ. ಐರ್ಲೆಂಡ್ ವಿರುದ್ಧ ಸೋಲು ತಂಡದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಿಲ್ಲ.ನಾವು ಐರ್ಲೆಂಡ್ ವಿರುದ್ಧ ಹಲವು ಅವಕಾಶ ಸೃಷ್ಟಿಸಿದ್ದೆವು. ಅಮೆರಿಕ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸುವೆವು’’ ಎಂದು ಭಾರತದ ಮುಖ್ಯ ಕೋಚ್ ಜೋಯರ್ಡ್ ಮರಿಜಿನ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಡ್ರಾ ಹಾಗೂ ಐರ್ಲೆಂಡ್ ವಿರುದ್ಧ 1-3 ಅಂತರದಿಂದ ಸೋತಿರುವ ಅಮೆರಿಕ ತಂಡ ಸದ್ಯ ‘ಬಿ’ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಹಾಗೂ ಅಮೆರಿಕ ತಲಾ ಒಂದು ಅಂಕ ಗಳಿಸಿವೆ. ಆದರೆ, ಗೋಲು ವ್ಯತ್ಯಾಸದಲ್ಲಿ ಭಾರತ ಮುಂದಿದೆ. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಬೇಕಾದರೆ ರವಿವಾರದ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾಗೊಳಿಸಲೇಬೇಕಾಗಿದೆ.
ಪಂದ್ಯ ಆರಂಭದ ಸಮಯ: ರಾತ್ರಿ 9:30







