ಚಿಕ್ಕಮಗಳೂರು: ಕೆಸರು ಗದ್ದೆಯಂತಾದ ಬಳ್ಳಾವರ-ಕೆಮ್ಮಣ್ಣುಗುಂಡಿ ಮುಖ್ಯರಸ್ತೆ
ಪ್ರವಾಸಿಗರ ವಾಹನ ಸಂಚಾರಕ್ಕೆ ಅಡಚಣೆ: ರಸ್ತೆ ದುರಸ್ತಿಗೆ ಆಗ್ರಹ

ಚಿಕ್ಕಮಗಳೂರು, ಜು.28: ತರೀಕೆರೆ ತಾಲೂಕಿನ ಲಿಂಗದಹಳ್ಳಿ ಮಾರ್ಗವಾಗಿ ಕೆಮ್ಮಣ್ಣುಗುಂಡಿ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಕೃಷ್ಣಾಪುರ ಗ್ರಾಮದಿಂದ ಕಲ್ಲತ್ತಿ ಎಸ್ಟೇಟ್‌ನವರೆಗೂ ತೀರಾ ಕಿರಿದಾಗಿದ್ದು, ತಿರುವುಗಳಿಂದ ಕೂಡಿರುವುದರಿಂದ ಎದುರು ಬದುರಾಗಿ ಬರುವ ವಾಹನಗಳಿಗೆ ತೊಂದರೆಯಾಗಿದೆ.
ಈ ಭಾಗದ ರಸ್ತೆ ಬದಿಯಲ್ಲಿರುವ ಮರಗಳು ರಸ್ತೆಯ ಕಡೆಗೆ ವಾಲಿಕೊಂಡಿರುವ ಕಾರಣ ಅನೇಕ ವಾಹನ ಸಂಚಾರ ದುಸ್ತರವಾಗಿದೆ. ಕೃಷ್ಣಾಪುರ ಗ್ರಾಮದಿಂದ ಕಲ್ಲತ್ತಿ ಕಾಫಿ ತೋಟದವರೆಗಿನ ಮುಖ್ಯರಸ್ತೆ ಅತ್ಯಂತ ಕಿರಿದಾಗಿರುವುದಲ್ಲದೇ ರಸ್ತೆ ತೀರಾ ಹದಗೆಟ್ಟಿದ್ದು, ಗುಂಡಿ ಗೊಟರುಗಳಿಂದ ತುಂಬಿ ಹೋಗಿರುವುದಲ್ಲದೇ ಗುಂಡಿ ಗಟಾರುಗಳಲ್ಲಿ ಕೆಸರು ಮತ್ತು ನೀರು ತುಂಬಿಕೊಂಡಿದ್ದು, ವಾಹನ ಸವಾರರುಗಳಿಗೆ ರಸ್ತೆಯಲ್ಲಿರುವ ಗುಂಡಿಗಳು ಕಾಣಿಸದೇ ಬೈಕು, ಸ್ಕೂಟರ್ ನಂತಹ ವಾಹನಗಳಿಂದ ಅಪಘಾತಗಳಾಗುತ್ತವೆ. ಜೊತೆಗೆ ಕಾರು, ಜೀಪು, ಬಸ್, ಲಾರಿ ಮುಂತಾದ ವಾಹನಗಳ ಚಾಲಕರುಗಳಿಗೂ ರಸ್ತೆಯಲ್ಲಿರುವ ಕೆಸರಿನಿಂದ ಅದರಲ್ಲಿರುವ ಗುಂಡಿಗಳು ಗೋಚರಿಸದೇ ತೊಂದರೆಗಳಾಗುತ್ತಿವೆ.
ಬಳ್ಳಾವರ ಗ್ರಾಮ ಜಂಕ್ಷನ್ ಆಗಿದ್ದು, ಇಲ್ಲಿ 1 ರಿಂದ 10ನೇ ತರಗತಿಗಳವರೆಗೆ ಸರಕಾರಿ ಶಾಲೆಗಳು ಹಾಗೂ ಸೆಂಟ್‌ಹ್ಯಾಮ್ಸ್ ಎಂಬ ಖಾಸಗಿ ಶಾಲೆಯು ಇದ್ದು, ಸಾವಿರಾರು ಮಕ್ಕಳು ಗ್ರಾಮಸ್ಥರು ಈ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ವಾಹನಗಳು ಚಲಿಸುವಾಗ ರಸ್ತೆಬದಿಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಕಸರಿನ ನೀರು ಹಾಗೂ ಕೆಸರು ಸಿಡಿಯುತ್ತಿದೆ. ಹೀಗಾಗಿ ವಾಹನಗಳಿಂದ ಕೆಸರು ಸಿಡಿಸಿಕೊಳ್ಳುತ್ತಿರುವ ಅನೇಕ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ವಾಪಸ್ ತಮ್ಮ ಮನೆಗಳಿಗೆ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ಕಲ್ಲತ್ತಿಪುರ ಸಂತೆಯೂ ಇದೇ ರಸ್ತೆಯ ಪಕ್ಕದಲ್ಲಿಯೇ ನಡೆಯುತ್ತಿದ್ದು, ಸಂತೆಯಿಂದ ದಿನನಿತ್ಯದ ವಸ್ತುಗಳ ಖರೀದಿಗೆ ಹೋಗುವ ಸಂದರ್ಭಗಳಲ್ಲಿ ಗ್ರಾಮಸ್ಥರುಗಳಿಗೂ ಕೆಸರು ಮಯವಾಗಿರುವ ರಸ್ತೆಯಿಂದ ಸಂಕಷ್ಟವಾಗಿದ್ದು, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನ ಹರಿಸಿ ಈ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರುಗಳು ಆಗ್ರಹಿಸಿದ್ದಾರೆ.







