ವಿದ್ಯಾರ್ಥಿಗಳು ನಾಡಿನ ಇತಿಹಾಸ ಅರಿಯಬೇಕು: ಎಚ್.ಆರ್.ಅಪ್ಪಣ್ಣಯ್ಯ
ಬೆಂಗಳೂರು, ಜು.29: ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಜ್ಞಾನಪೀಠ ಪುರಸ್ಕೃತರೂ ಸೇರಿದಂತೆ ಎಲ್ಲಾ ಸಾಹಿತಿಗಳು ಹಾಗೂ ಕವಿಗಳು ಮತ್ತು ಕನ್ನಡ ನಾಡಿನ ಬಗ್ಗೆ ತಿಳಿಯಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಆರ್.ಅಪ್ಪಣ್ಣಯ್ಯ ಹೇಳಿದ್ದಾರೆ.
ರವಿವಾರ ನಗರದ ಕಸಾಪದಲ್ಲಿನ ಕೃಷ್ಣರಾಜ ಪರಿಷ್ಮಂದಿರಲ್ಲಿ ಇಜ್ಞಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡ ನೆಲ-ಜಲ: ನಾಳಿನ ಅರಿವು ಎಂಬ ವಿಚಾರ ಸಂಕಿರಣ ಹಾಗೂ ಟಿ.ಎಸ್.ಗೋಪಾಲ್ ಅವರು ರಚಿಸಿರುವ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ ನಾಡಿನಿಂದ ಅನೇಕರು ಸಾಧನೆ ಮಾಡಿದವರಿದ್ದಾರೆ. ಅವರ ಕುರಿತು ಗಾಢವಾದ ಅಧ್ಯಯನ ಅಗತ್ಯವಿದೆ ಎಂದರು.
ಇಜ್ಞಾನ ಟ್ರಸ್ಟ್ ಕನ್ನಡ ನೆಲ, ಜಲ, ನಾಡಿನ ಬಗ್ಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕನ್ನಡ ಸಂಸ್ಕೃತಿ, ಪರಂಪರೆಯ ಪ್ರಚಾರದಲ್ಲಿ ತೊಡಗಿದೆ. ಎಲ್ಲರೂ ನಮ್ಮ ನಾಡಿನಲ್ಲಿ ಜನಿಸಿದ ಸಾಹಿತಿಗಳು, ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಆದರ್ಶವಾಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವರ ರೀತಿಯಲ್ಲಿಯೇ ಹೆಚ್ಚು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್ ಮಾತನಾಡಿ, ಟ್ರಸ್ಟ್ 100 ಶಾಲೆಗಳಿಗೆ ಪುಸ್ತಕಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದೆ. ಹಿರಿಯ ಕವಿಗಳು ಸಾಮಾಜಿಕ ಸ್ಥಿರತೆಗೆ ಶ್ರಮಿಸಿದ್ದಾರೆ. ಅವರ ದಾರಿಯಲ್ಲೇ ಯುವ ಪೀಳಿಗೆ ಮುಂದುವರಿಯಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ಟಿ.ಎಸ್.ಗೋಪಾಲ್ ಅವರು ಪುಸ್ತಕದಲ್ಲಿ ಸವಿವರವಾಗಿ ವಿವರಿಸಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ ಇಜ್ಞಾನ ಟ್ರಸ್ಟ್ ಅಧ್ಯಕ್ಷ ಟಿ.ಎಸ್.ಗೋಪಾಲ್ ಅವರು ರಚಿಸಿದ ಹಳೆಗನ್ನಡ ಶುಭಾಷಯಗಳು, ಜ್ಞಾನಪೀಠಕ್ಕೆ ಮೆರಗು ಕನ್ನಡದ ಬೆರಗು, ಹಳೆಗನ್ನಡ ಸುಭಾಷಿತಗಳು, ನ್ಯಾಯ ಅಂದ್ರೆ ನ್ಯಾಯ ನಾಟಕಗಳು, ಅಧ್ಯಾಪನದ ಅವಾಂತರಗಳು ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನವಕರ್ನಾಟಕ ಪ್ರಕಾಶನದ ರಮೇಶ ಉಡುಪ, ಕೆ.ಎಸ್. ನವೀನ್ ಉಪಸ್ಥಿತರಿದ್ದರು.







