ವಿದ್ಯಾರ್ಥಿಗಳು ವಿಜ್ಞಾನದ ಕಡೆಗೆ ಆಸಕ್ತಿ ವಹಿಸಲಿ: ಹಿರಿಯ ವಿಜ್ಞಾನಿ ಎಂಆರ್‌ಎನ್ ಮೂರ್ತಿ
ಬೆಂಗಳೂರು, ಜು. 29: ಪೋಷಕರು ಹಾಗೂ ಶಾಲಾ-ಕಾಲೇಜುಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದ ಕಡೆಗೆ ಹೆಚ್ಚು ಆಸಕ್ತಿ ಮೂಡಿಸುವಂತಹ ವಾತಾವರಣವನ್ನು ನಿರ್ಮಿಸಬೇಕೆಂದು ಹಿರಿಯ ವಿಜ್ಞಾನಿ ಎಂಆರ್‌ಎನ್ ಮೂರ್ತಿ ತಿಳಿಸಿದರು.
ರವಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಗರದ ವಿಜ್ಞಾನದ ಭವನದಲ್ಲಿ ಆಯೋಜಿಸಿದ್ದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ಜಗತ್ತು ವಿಜ್ಞಾನದ ತತ್ವದಡಿ ಸಾಗುತ್ತಿದೆ. ಹೀಗಾಗಿಯೆ ವಿಜ್ಞಾನಿಗಳ ಸಂಶೋಧನೆಗಳಯ ಯಶಸ್ವಿಯಾಗಿ ಹೊಸ, ಹೊಸ ಅವಿಷ್ಕಾರಗಳು ಮೂಡುತ್ತಿರುವುದು. ವಿಜ್ಞಾನದ ಪ್ರಯೋಗಕ್ಕೆ ಚೌಕಟ್ಟಿಗೆ ಸಿಲುಕದ ಯಾವುದೆ ವಸ್ತುವಿಲ್ಲ. ಪ್ರತಿಯೊಂದು ವಸ್ತು ವಿಷಯದಿಂದಲೂ ಹೊಸ ಅವಿಷ್ಕಾರವೊಂದನ್ನು ಮೂಡಿಸಬಹುದು. ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನದತ್ತ ವಿಶೇಷ ಆಸಕ್ತಿ ತಾಳಬೇಕೆಂದು ಅವರು ಆಶಿಸಿದರು.
ಬೆಂಗಳೂರಿನ ವಿದ್ಯಾರ್ಥಿಗಳಿಗೆ ವಿಜ್ಞಾನ ಕುರಿತು ಆಸಕ್ತಿ ಮೂಡಿಸಲು ಹಲವರು ಅವಕಾಶಗಳಿವೆ. ನೆಹರು ತಾರಾಲಯ, ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಆಗಾಗ ಭೇಟಿ ಕೊಡಬೇಕು. ಪ್ರತಿವಾರ ನೆಹರು ತಾರಾಲಯದಲ್ಲಿ ಆಕಾಶಕಾಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಬಿ.ಕೆ.ಬಸವರಾಜು ಮಾತನಾಡಿ, ವಿಜ್ಞಾನಿಗಳು ಸಂಶೋಧಿಸಿರುವ ಅವಿಷ್ಕಾರಗಳಿಂದ ಇಡೀ ಜಗತ್ತಿನ ಎಲ್ಲ ಕ್ಷೇತ್ರವು ಮುನ್ನಡೆಯುತ್ತಿವೆ. ಹೀಗಾಗಿ ವಿದ್ಯಾರ್ಥಿಗಳು ಜಗತ್ತನ್ನು ಬೆಳಗಿಸಿದ ವಿಜ್ಞಾನಿಗಳ ಬದುಕನ್ನು ಅರಿಯುವ ಮೂಲಕ ಅವರಂತಾಗಲು ಪ್ರಯತ್ನಿಸಬೇಕೆಂದು ಆಶಿಸಿದರು.
ಜಗತ್ತಿನ ಹಲವು ವಿಜ್ಞಾನಿಗಳು ತಮ್ಮ ಪ್ರಯೋಗಗಳ ಪರೀಕ್ಷೆಗೆ ಒಡ್ಡುವಾಗ ತಮ್ಮ ಮನೆಯವರನ್ನು ಬಲಿಕೊಟ್ಟಿದ್ದಾರೆ. ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಅವಮಾನಕ್ಕೆ ತುತ್ತಾಗಿದ್ದಾರೆ. ಇವೆಲ್ಲ ಸಹಿಸಿಕೊಂಡೆ ತಮ್ಮ ಪ್ರಯೋಗಗಳಲ್ಲಿ ಯಶಸ್ವಿಯಾಗಿದ್ದಾರೆ. ಅವರ ಬದುಕಿನ ಸ್ಫೂರ್ತಿ ಇಂದಿನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಅವರು ಆಶಿಸಿದರು.







