ಪ್ರಾಮಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ: ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಜು.27: ಈಗಿನ ದಿನಮಾನದಲ್ಲಿ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಜನಹಿತ ಹಾಗೂ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ರವಿವಾರ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅವರ 100ರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ನವ ಪೀಳಿಗೆ ಜನಹಿತ ಹಾಗೂ ರಾಷ್ಟ್ರಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕ ಸೇವೆ ಮಾಡುವ ಸದುದ್ದೇಶದಿಂದ ಸಾರ್ವಜನಿಕ ಬದುಕಿಗೆ ಬರಬೇಕು. ವೈಯಕ್ತಿಕ ಹಾಗೂ ಸ್ವಾರ್ಥ ಸಾಧನೆಗಲ್ಲ ಎಂದರು.
ಈಗಿನ ಸಮಾಜದ ಸ್ಥಿತಿಗತಿಗಳನ್ನು ಗಮನಿಸಿದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಗಾಂಧಿ ಮಾರ್ಗದಲ್ಲಿ ನಾವೆಲ್ಲಾ ನಾಯಕರು ಹೋಗುತ್ತಿದ್ದೇವೆಯೇ ಎಂಬುದನ್ನು ನೆನಪಿಸಿಕೊಂಡರೆ ದುಃಖ ಆಗುತ್ತದೆ. ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ದುಸ್ತರವಾಗಬಹುದು ಎಂದು ತಿಳಿಸಿದರು. ಈಗೆಲ್ಲಾ ರಾಜಕೀಯ ಸ್ಥಾನಮಾನಗಳು ಸಿಗುತ್ತೆ ಎಂದರೆ ಎಲ್ಲ ಮೌಲ್ಯಗಳನ್ನು ತೂರಿ ಬಿಡುವ ಜನರಿದ್ದಾರೆ. ಇಂತಹ ಜನರ ನಡುವೆಯೂ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಕೆಂಗಲ್ ಹನುಮಂತಯ್ಯನವರಿಗೆ ಎಂಎಲ್‌ಸಿ ಸ್ಥಾನ ನೀಡುವ ಸಂದರ್ಭದಲ್ಲಿ ಹೇಳಿದ ಮಾತುಗಳನ್ನು ಅವರು ನಂಬಿದ ಬದುಕಿನ ಮೌಲ್ಯಗಳನ್ನು ಅನಾವರಣಗೊಳಿಸುತ್ತದೆ ಎಂದರು.
ಬಡತನವನ್ನೇ ಅಪ್ಪಿಕೊಂಡು ಮೌಲ್ಯಗಳನ್ನು ಬದುಕಿನ ಆಧಾರವಾಗಿಸಿಕೊಂಡು ಪ್ರಮಾಣಿಕವಾಗಿ ಹೋರಾಟದ ಜೀವನ ನಡೆಸಿದ ದೊರೆಸ್ವಾಮಿ ಅವರ ವ್ಯಕ್ತಿತ್ವ ದರ್ಶನ ಎಲ್ಲರಿಗೂ ಆಗಬೇಕು. ಅವರ ಮೂಲಕ ನಿಜವಾದ ಗಾಂಧಿ ತತ್ವಗಳು ಜನರಿಗೆ ತಲುಪುವಂತೆ ಸರಕಾರ ದೊರೆಸ್ವಾಮಿ ಅವರನ್ನು ಇಡೀ ರಾಜ್ಯ ಸುತ್ತುವಂತೆ ಮಾಡುವ ಮೂಲಕ ಅವರ ವ್ಯಕ್ತಿತ್ವ ದರ್ಶನದಿಂದ ಹೊಸ ಪೀಳಿಗೆಯಲ್ಲಿ ಗಾಂಧಿ ತತ್ವಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬಹುದಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಲವು ಸಂಘಟನೆಗಳು, ಬಲಿಷ್ಠ ಹೋರಾಟಗಾರರು ಇದ್ದಾರೆ. ಆದರೆ, ಸರಕಾರ ಹೆದರುವ ಏಕೈಕ ಹೋರಾಟಗಾರರು ದೊರೆಸ್ವಾಮಿ ಮಾತ್ರ ಎಂದು ಅವರು ಹೇಳಿದರು. ದೊರೆಸ್ವಾಮಿ ಅವರ ಮಾತಿನ ಸ್ಫೂರ್ತಿಯಿಂದಲೇ ನಾವು ಗ್ರಾಮೀಣ ಜನರ ಸೇವೆ, ಶುದ್ಧ ಕುಡಿಯುವ ನೀರಿನಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಅವರ ನಡೆ, ನುಡಿ, ಮೌಲ್ಯಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ತಿಳಿಸಿದರು.
ಇದೇ ವೇಳೆ ಡಾ.ಎಚ್.ಎಸ್.ದೊರೆಸ್ವಾಮಿ ಕುರಿತಾದ ಗಾಳಿಗೆ ಸಿಕ್ಕ ತರಗೆಲೆ ಕೃತಿ ಬಿಡುಗಡೆ ಮಾಡಲಾಯಿತು. ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಾಂಧಿ ಪ್ರಣಿತ ಸಂಘ ಸಂಸ್ಥೆಗಳು ದೊರೆಸ್ವಾಮಿ ಅವರ ಪತ್ನಿ ಲಲಿತಮ್ಮ ಅವರನ್ನು ಆತ್ಮಿಯವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರುಗಳಾದ ರಾಜಶೇಖರನ್, ಸಿ.ಕೆ.ಜಾಫರ್ ಷರೀಫ್, ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಸಂಸದ ಹನುಮಂತಪ್ಪ, ಸಾಹಿತಿ ಹಂಪಾ ನಾಗರಾಜಯ್ಯ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವುಡೆ ಪಿ. ಕೃಷ್ಣ, ನಿವೃತ್ತ ಮುಖ್ಯ ನ್ಯಾಯಮೂತಿರ್ ರಾಮಜೋಯಿಸ್ ಉಪಸ್ಥಿತರಿದ್ದರು.







