ಮಡಿಕೇರಿ, ಮಂಗಳೂರು ರಸ್ತೆಯಲ್ಲಿ ಬೃಹತ್ ಗುಂಡಿ: ವಾಹನ ಸಂಚಾರ ದುಸ್ತರ

ಮಡಿಕೇರಿ, ಜು.29: ಕಳೆದ ಒಂದು ತಿಂಗಳ ಮಹಾಮಳೆಯ ಪರಿಣಾಮ ಬಿರುಕು ಕಾಣಿಸಿಕೊಂಡು ಕೆಲವು ಕಡೆ ಕುಸಿತ ಕಂಡಿದ್ದ ಮಡಿಕೇರಿ, ಮಂಗಳೂರು ಹೆದ್ದಾರಿಯ ಮಧ್ಯ ಭಾಗದಲ್ಲಿ ಬೃಹತ್ ಗುಂಡಿ ಕಾಣಿಸಿಕೊಂಡಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ.
ಮಡಿಕೇರಿ ಸಮೀಪ ಕಾಟಕೇರಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಭಾಗದಲ್ಲಿಯೇ ಸುಮಾರು ಮೂರು ಅಡಿಯಷ್ಟು ಆಳ ವೃತ್ತಾಕಾರದಲ್ಲಿ ರಸ್ತೆ ಕುಸಿದಿದೆ. ಭಾನುವಾರ ತಡರಾತ್ರಿ ಗುಂಡಿ ಬಿದ್ದಿರಬಹುದೆಂದು ಅಧಿಕಾರಿಗಳು ತಿಳಿಸಿದ್ದು, ಮುಂಜಾಗೃತಾ ಕ್ರಮವಾಗಿ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ರಸ್ತೆಯ ಮಧ್ಯೆ ಭಾಗದಲ್ಲಿಯೇ ಬೃಹತ್ ಗುಂಡಿಯಾಗಿರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ದುರಸ್ತಿಯ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದರೂ ಒಂದು ತಿಂಗಳು ಸುರಿದ ದಾಖಲೆ ಪ್ರಮಾಣದ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಅಲ್ಲಲ್ಲಿ ಬರೆ, ಮನೆ, ರಸ್ತೆಗಳು ಕುಸಿಯುತ್ತಿರುವ ಘಟನೆಗಳು ಮುಂದುವರಿಯುತ್ತಲೇ ಇದೆ. ಮಡಿಕೇರಿ, ಮಂಗಳೂರು ಹೆದ್ದಾರಿಯ ಒಂದು ಭಾಗ ಕಳೆದ ವಾರವಷ್ಟೇ ಕುಸಿತ ಕಂಡಿತ್ತು. ಇದೀಗ ಮಧ್ಯ ಭಾಗದಲ್ಲೇ ಕುಸಿತ ಕಂಡು ಅಪಾಯದ ಮನ್ಸೂಚನೆ ನೀಡಿದೆ.







