ಅಖಂಡ ಕರ್ನಾಟಕದ ಏಕೀಕರಣ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ: ಸಿದ್ದರಾಮಯ್ಯ

ಮೈಸೂರು,ಜು.29: ಅಖಂಡ ಕರ್ನಾಟಕದ ಏಕೀಕರಣ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಟಿ.ಕೆ.ಲೇಔಟ್ ನಲ್ಲಿರುವ ತಮ್ಮ ನಿವಾಸದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಆ ಭಾಗದ ಅಭಿವೃದ್ದಿಗೆ ಕೋಟ್ಯಾಂತರ ಹಣ ಕೊಟ್ಟಿದ್ದೇನೆ. ಈಗ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಾರೆ. ಪ್ರತ್ಯೇಕತೆ ಕೂಗು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಆ ಭಾಗಕ್ಕೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಉಮೇಶ್ ಕತ್ತಿ ಸೇರಿದಂತೆ ಆ ಭಾಗದ ಅಭಿವೃದ್ದಿಗೆ ಯಾರೂ ಕಾಣಿಕೆ ನೀಡಿಲ್ಲ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರಕಾರದ ಕೊಡುಗೆ ಶೂನ್ಯ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ದೊರೆಸ್ವಾಮಿ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
ದಿವಂಗತ ರಾಕೇಶ್ ಸಿದ್ದರಾಮಯ್ಯ ಪುಣ್ಯಸ್ಮರಣೆ: ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ನಿಧನರಾಗಿ ಜು.30ಕ್ಕೆ ಎರಡು ವರ್ಷ ತುಂಬುತ್ತಿದ್ದು, ಆ ಹಿನ್ನಲೆಯಲ್ಲಿ ಅವರ ಟಿ.ಕಾಟೂರಿನ ತೋಟದ ಮನೆಯಲ್ಲಿ ಎರಡನೇ ವರ್ಷದ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು. ಅದರಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಕುಟುಂಬಸ್ಥರು ಮತ್ತು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ.







