ತಪಾಸಣೆ ನೆಪದಲ್ಲಿ ತೆರಿಗೆ ಇಲಾಖಾಧಿಕಾರಿಗಳಿಂದ ಕಿರುಕುಳ: ಬೀಡಿ ಗುತ್ತಿಗೆದಾರರ ಆರೋಪ
ಮಂಗಳೂರು, ಜು.29: ಬೀಡಿಯ ಕಂಪೆನಿಗಳಿಂದ ಎಲೆ ಮತ್ತು ತಂಬಾಕುಗಳನ್ನು ಕಾನೂನುಬದ್ಧವಾಗಿ ಸಾಗಾಟ ಮಾಡುತ್ತಿದ್ದರೂ ಕೂಡ ತೆರಿಗೆ ಇಲಾಖೆಯ ಕೆಲವು ಅಧಿಕಾರಿಗಳು ರಸ್ತೆ ಮಧ್ಯೆ ವಾಹನಗಳನ್ನು ತಪಾಸಣೆ ಮಾಡುವ ನೆಪದಲ್ಲಿ ವಿನಾ ಕಾರಣ ಕಿರುಕುಳ ನೀಡುತ್ತಿದ್ದಾರೆ. ದಂಡ ಪಾವತಿಸುವಂತೆ ಸೂಚಿಸಿದ ಮೇರೆಗೆ ದಂಡ ಕಟ್ಟಿದರೂ ರಶೀದಿ ನೀಡದೆ ವಂಚಿಸುತ್ತಿದ್ದಾರೆ. ಹೀಗೆ ತೆರಿಗೆ ಇಲಾಖೆಯ ಹಗಲು ದರೋಡೆಯಿಂದ ಬೀಡಿ ಗುತ್ತಿಗೆದಾರರು ಕೆಲಸ ನಿರ್ವಹಿಸಲಾಗದ ಸ್ಥಿತಿ ತಲುಪಿದ್ದಾರೆ ಎಂದು ಆರೋಪಿಸಿರುವ ಸೌತ್ ಕೆನರಾ ಮತ್ತು ಉಡುಪಿ ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ, ಈ ಬಗ್ಗೆ ಸರಕಾರ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೀಡಿ ಗುತ್ತಿಗೆದಾರರು ಆಯಾಯ ಕಂಪೆನಿಗಳ ಗೋದಾಮುಗಳಿಂದ ಬೀಡಿ ಎಲೆ ಮತ್ತು ತಂಬಾಕುಗಳನ್ನು ಜಿಎಸ್‌ಟಿ ಸಹಿತ ಇ-ವೇ ಬಿಲ್ ಮೂಲಕ ಸಾಗಾಟ ಮಾಡುತ್ತಾರೆ. ಆದರೆ ರಸ್ತೆಯ ಮಧ್ಯೆ ಇಂತಹ ವಾಹನಗಳನ್ನು ತಡೆದು ನಿಲ್ಲಿಸುವ ತೆರಿಗೆ ಇಲಾಖೆಯ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಸಲ್ಲಿಸುತ್ತಾರೆ. ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರೂ ಕೂಡ ಪರಿಗಣಿಸದೆ ದಂಡ ಕೊಡಿ ಎಂದು ಪೀಡಿಸುತ್ತಾರೆ. ಈ ಮಧ್ಯೆ ಕಾರ್ಮಿಕರು ಕಟ್ಟಿದ ಬೀಡಿಯನ್ನು ಕೂಡ ಕಂಪೆನಿಗೆ ಸಾಗಿಸುವಾಗಲೂ ಕೂಡ ಈ ಅಧಿಕಾರಿಗಳ ಕಿರುಕುಳ ವಿಪರೀತವಾಗಿದೆ. ದಂಡ ಪಾವತಿಸಿದರೂ ರಶೀದಿಯನ್ನೂ ನೀಡಲು ಹಿಂದೇಟು ಹಾಕುತ್ತಾರೆ ಎಂದು ಆರೋಪಿಸಿದರು.
ಬೀಡಿ ಉದ್ಯಮವು ಇಂದು ನಿನ್ನೆಯದಲ್ಲ. ಅದು ಬ್ರಿಟಿಷರ ಕಾಲದಿಂದಲೇ ಇತ್ತು. ವಿದೇಶಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಬೀಡಿ ರಫ್ತಾಗುತ್ತಿತ್ತು. ಈ ಮಧ್ಯೆ ಪ್ರಧಾನಿ ಚರಣ್ ಸಿಂಗ್‌ರ ತಪ್ಪು ನೀತಿಯಿಂದಾಗಿ ಬೀಡಿ ಉದ್ಯಮಕ್ಕೆ ಹೊಡೆತ ಬೀಳಲು ಆರಂಭಿಸಿತ್ತು. ಬೀಡಿ ಉದ್ಯಮದಲ್ಲಿ ರಾಜ್ಯದ ಅದರಲ್ಲೂ ದ.ಕ.ಜಿಲ್ಲೆಯ ಕೊಡುಗೆ ಅಪಾರ. ಇಲ್ಲಿ ಲಕ್ಷಾಂತರ ಕುಟುಂಬಗಳು ಬೀಡಿ ಉದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿತ್ತು. ಅದರಲ್ಲೂ ಮಹಿಳೆಯರ ಪಾಲಿಗೆ ಇದು ಅಮೃತವಾಗಿತ್ತು. ಗೃಹ ಕಸಬು ಆಗಿದ್ದರಿಂದ ಸಾವಿರಾರು ಮಹಿಳೆಯರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ನಾಲ್ಕೈದು ವರ್ಷದಿಂದ ಬೀಡಿ ಉದ್ಯಮ ಕುಂಟುತ್ತಾ ಸಾಗಿವೆ. 2020ನೆ ಇಸವಿಗೆ ಇದು ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಇದೆ. ಹಾಗಾಗಿ ಸರಕಾರ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮುಹಮ್ಮದ್ ರಫಿ ಅಭಿಪ್ರಾಯಪಟ್ಟಿದ್ದಾರೆ.
ಈ ಉದ್ಯಮವು ದೇಶಾದ್ಯಂತ ಅರಣ್ಯ ವಾಸಿಗಳಿಗೆ ಅದರಲ್ಲೂ ಬುಡಕಟ್ಟು ಜನಾಂಗಗಳಿಗೆ, ತಂಬಾಕು ಕೃಷಿಕರಿಗೆ, ಗೃಹ ಉದ್ಯೋಗವಾಗಿ ಪರಿಗಣಿಸಿದ್ದ ಮಹಿಳೆಯರಿಗೆ ವರದಾನವಾಗಿತ್ತು. ದೇಶದ 4 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತಂಬಾಕು ಕೃಷಿ ಬೆಳೆಯಲಾಗುತ್ತಿತ್ತು. ಈ ಕೃಷಿಯಲ್ಲಿ ಸುಮಾರು 60 ಲಕ್ಷ ಮಂದಿ ತೊಡಗಿಸಿಕೊಂಡಿದ್ದರು. ಭಾರತವು ತಂಬಾಕು ಬೆಳೆಯಲ್ಲಿ ವಿಶ್ವದಲ್ಲೇ ಎರಡನೆ ಸ್ಥಾನದಲ್ಲಿರುವುದು ಗಮನಾರ್ಹವಾಗಿದೆ. ಸುಮಾರು 2 ಕೋಟಿ ಜನರು ತಂಬಾಕು ಉತ್ಪಾದನೆ ಆಧಾರಿತ ಕೈಗಾರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. 75 ಲಕ್ಷ ಆದಿವಾಸಿ ಜನರು ಬೀಡಿಯ ಎಲೆ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದಹಾಗೆ, ಬೀಡಿ ಕಟ್ಟಲು ಬೇಕಾದ ‘ತೆಂಡಲಿ’ ಎಲೆಯು ಮಧ್ಯಪ್ರದೇಶ, ಒರಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ ರಾಜ್ಯಗಳ ಬುಡಕಟ್ಟು ಜನರಿಗೆ ಬದುಕು ಕಟ್ಟಿಕೊಟ್ಟಿವೆ. ಸುಮಾರು 3 ತಿಂಗಳ ಕಾಲ ಈ ಬುಡಕಟ್ಟು ಜನರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿ ರುತ್ತಾರೆ.
ಬೀಡಿ ಉದ್ಯಮವು ಬೀಡಿ ಕಾರ್ಮಿಕರ ಮೇಲೆ ಮಾತ್ರವಲ್ಲ, ಬೀಡಿ ಮಾಲಕರು ಮತ್ತು ಕಾರ್ಮಿಕರ ನಡುವೆ ಮಧ್ಯಸ್ಥಿಕೆ ವಹಿಸುವ ಗುತ್ತಿಗೆದಾರರ ಬದುಕಿನ ಮೇಲೂ ಹೊಡೆತ ನೀಡಿವೆ. ರಾಜ್ಯದಲ್ಲಿ ಸುಮಾರು 7ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ಅದರಲ್ಲೂ ಅವಿಭಜಿತ ದ.ಕ.ಜಿಲ್ಲೆಯಲ್ಲಿ 3 ಲಕ್ಷ ಕಾರ್ಮಿಕರಿದ್ದಾರೆ. ಈ ಕಾರ್ಮಿಕರ ಮತ್ತು ಮಾಲಕರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುವ 2 ಸಾವಿರಕ್ಕೂ ಅಧಿಕ ಬೀಡಿ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಬೀಡಿ ಉದ್ಯಮ ನಾಶವಾದರೆ ಲಕ್ಷಾಂತರ ಕಾರ್ಮಿಕರು ಮಾತ್ರವಲ್ಲ, ಸಾವಿರಾರು ಗುತ್ತಿಗೆದಾರರು ಮತ್ತವರ ಕುಟುಂಬ ಕೂಡ ಬೀದಿಪಾಲಾಗಬಹುದು ಎಂದು ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮುಹಮ್ಮದ್ ರಫಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ಬೀಡಿ ಉದ್ಯಮದ ಮೇಲೆ ವಿಧಿಸಿದ ಕಾನೂನು ಕೂಡ ಬೀಡಿ ಉದ್ಯಮದ ಮೇಲೆ ಹೊಡೆತ ನೀಡಿವೆ. ಪ್ರಸ್ತುತ ಒಂದು ವಾರದಲ್ಲಿ ಕೇವಲ 3 ದಿನಕ್ಕೆ ಮಾತ್ರ ಕೆಲಸ ಲಭ್ಯವಾಗುತ್ತದೆ. ಆರಂಭದಲ್ಲಿ ದಿನಕ್ಕೆ ಕನಿಷ್ಠ 200 ಬೀಡಿಗಳನ್ನು ಕಟ್ಟುವಷ್ಟು ಎಲೆ-ತಂಬಾಕು ಸಿಗುತ್ತಿರಲಿಲ್ಲ. ಹೋರಾಟದ ಬಳಿಕ ಇದೀಗ ದಿನಕ್ಕೆ 550ರಿಂದ 600ರಷ್ಟು ಬೀಡಿ ಕಟ್ಟಲು ಎಲೆ-ತಂಬಾಕು ಸಿಗುತ್ತದೆ. ಆದರೆ, ಇದು ಯಾವುದಕ್ಕೂ ಸಾಲದು. ಬೀಡಿ ಉದ್ಯಮ ನಾಶದ ಹಿಂದೆ ಸಿಗರೇಟು ಕಂಪೆನಿಗಳ ಹುನ್ನಾರವನ್ನೂ ಅಲ್ಲಗಳೆಯುವಂತಿಲ್ಲ. ಬೀಡಿ ಉದ್ಯಮ ಉಳಿಸಿಕೊಡಿ ಎಂದು ಕಳೆದ ವರ್ಷ ಮಂಗಳೂರಿನಲ್ಲಿ ಸಮಾವೇಶವೊಂದನ್ನು ಆಯೋಜಿಸಿ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು. ಅದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕರೂ ಆಡಳಿತಾತ್ಮಕವಾಗಿ ಕೆಲಸ ಆಗಿಲ್ಲ. ಹಾಗಾಗಿ ಯೂನಿಯನ್ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಮುಹಮ್ಮದ್ ರಫಿ ಎಚ್ಚರಿಸಿದ್ದಾರೆ.







