ಮೂಡುಬಿದಿರೆ: ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ವಿದ್ಯಾರ್ಥಿನಿ ಮೃತ್ಯು

ಮೂಡುಬಿದಿರೆ, ಜು.29: ಕಾಲೇಜು ವಿದ್ಯಾರ್ಥಿನಿಯೋರ್ವಳು ಕಾಯಿಲೆ ಉಲ್ಬಣಿಸಿ ಮೃತಪಟ್ಟ ಘಟನೆ ಅಶ್ವತ್ಥಪುರ ಸಮೀಪದ ನೀರ್ಕೆರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಮೃತ ವಿದ್ಯಾರ್ಥಿನಿ ಸಿದ್ಧಕಟ್ಟೆ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ ಯಕ್ಷಿತಾ (19)ಎಂದು ತಿಳಿದು ಬಂದಿದೆ. ಆಕೆ ಕೆಲವು ಸಮಯಗಳಿಂದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರೂ ಈ ವಿಷಯವನ್ನು ತನ್ನ ಮನೆಯವರಲ್ಲಿ ತಿಳಿಸದೆ ಇದ್ದುದರಿಂದ ಆಕೆಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎನ್ನಲಾಗಿದೆ. ಕಾಲೇಜಿನಿಂದ ಬಂದವಳು ಮನೆಯಲ್ಲಿ ಮಲಗುತ್ತಿದ್ದಳೆನ್ನಲಾಗಿದೆ. ತಾಯಿ ವಿಚಾರಿಸಿದಾಗ ಏನೂ ಇಲ್ಲ ಎನ್ನುತ್ತಿದ್ದಾಳೆನ್ನಲಾಗಿದೆ. ಅಸೌಖ್ಯದ ಹಿನ್ನೆಲೆಯಲ್ಲಿ ಎರಡು ದಿನ ಕಾಲೇಜಿಗೆ ಹೋಗದೆ ಇದ್ದಾಗ ಆತಂಕಗೊಂಡ ಮನೆಯವರು ಈಕೆಯನ್ನು ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅದಾಗಲೇ ಆಕೆಯ ರಕ್ತದೊತ್ತಡ ತೀವ್ರ ಇಳಿಕೆಯಾಗಿರುವುದು ಮತ್ತು ಸಕ್ಕರೆ ಕಾಯಿಲೆ ತೀವ್ರ ಉಲ್ಬಣಗೊಂಡಿರುವುದರಿಂದ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಂಜೆ ಮೃತಪಟ್ಟರೆ.





