ವಿಮಾಸಂಸ್ಥೆಗಳಿಂದ ಗ್ರಾಹಕರು ಪಡೆಯದೆ ಬಿಟ್ಟಿರುವ ಹಣ ಎಷ್ಟು ಸಾವಿರ ಕೋಟಿ ರೂ. ಗೊತ್ತಾ ?
ಐಆರ್‌ಡಿಎಐ ವರದಿಯಲ್ಲೇನಿದೆ ?

ಹೊಸದಿಲ್ಲಿ, ಜು.29: ಜೀವವಿಮೆ ಮಾಡಿಸಿಕೊಂಡು ವಿಮಾ ಅವಧಿ ಮುಗಿದರೂ ಹಣ ಮರಳಿ ಪಡೆಯಲು ಗ್ರಾಹಕರು ಹಕ್ಕು ಸಾಧಿಸದ (ಕ್ಲೇಮ್) 15,167 ಕೋಟಿ ರೂ. ಮೊತ್ತದ ಹಣ ದೇಶದ 23 ಜೀವವಿಮಾ ಸಂಸ್ಥೆಗಳಲ್ಲಿ ಬಾಕಿಯಿದೆ ಎಂದು ಐಆರ್‌ಡಿಎಐ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ವಿಮಾ ಪಾಲಿಸಿದಾರರು ಅಥವಾ ಫಲಾನುಭವಿಗಳನ್ನು ಗುರುತಿಸಿ ಹಣ ಪಾವತಿಸುವಂತೆ ವಿಮಾ ನಿಯಂತ್ರಣ ಸಂಸ್ಥೆ ಐಆರ್‌ಡಿಎಐ ಸೂಚಿಸಿದೆ.
2018ರ ಮಾರ್ಚ್ 31ರವರೆಗಿನ ಅವಧಿಯಲ್ಲಿ ‘ಕ್ಲೇಮ್ ’ಆಗದ ಒಟ್ಟು 15,167 ಕೋಟಿ ರೂ. ಮೊತ್ತದಲ್ಲಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ದ ಬಳಿ 10,509 ಕೋಟಿ ರೂ. ಇದ್ದರೆ ಉಳಿದ 22 ಖಾಸಗಿ ವಿಮಾ ಸಂಸ್ಥೆಗಳ ಪಾಲು 4,657.45 ಕೋಟಿ ರೂ. ಆಗಿದೆ. ಖಾಸಗಿ ವಿಮಾಸಂಸ್ಥೆಗಳ ಪೈಕಿ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್‌ಶೂರೆನ್ಸ್ ಸಂಸ್ಥೆ 807.4 ಕೋಟಿ ರೂ, ರಿಲೈಯನ್ಸ್ ನಿಪ್ಪಾನ್ ಲೈಫ್ ಇನ್ಷೂರೆನ್ಸ್ 696.12 ಕೋಟಿ ರೂ, ಎಸ್‌ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ 678.59 ಕೋಟಿ ರೂ, ಎಚ್‌ಡಿಎಫ್‌ಸಿ ಸ್ಟಾಂಡರ್ಡ್ ಲೈಫ್ ಇನ್ಷೂರೆನ್ಸ್ 659.3 ಕೋಟಿ ರೂ. ಮೊತ್ತವನ್ನು ಹೊಂದಿದೆ.
ತಮ್ಮ ವೆಬ್‌ಸೈಟ್‌ಗಳಲ್ಲಿ ಹುಡುಕಾಟ ನಡೆಸುವ ವ್ಯವಸ್ಥೆಯೊಂದನ್ನು ರೂಪಿಸಿ, ಪಾಲಿಸಿದಾರರು, ಫಲಾನುಭವಿಗಳು ಅಥವಾ ಅವಲಂಬಿತರು ತಮಗೆ ಬರಬೇಕಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡುವಂತೆ ವಿಮಾ ಸಂಸ್ಥೆಗಳಿಗೆ ಐಆರ್‌ಡಿಎಐ ತಿಳಿಸಿದೆ. ತಮ್ಮ ಪಾಲಿಸಿ ನಂಬರ್, ಪಾಲಿಸಿದಾರನ ಪಾನ್‌ಕಾರ್ಡ್ ಸಂಖ್ಯೆ, ಹೆಸರು, ಜನ್ಮದಿನಾಂಕ ಅಥವಾ ಆಧಾರ್ ನಂಬರ್‌ಗಳನ್ನು ನಮೂದಿಸಿ ತಮ್ಮ ಜೀವವಿಮೆ ಕರಾರುಪತ್ರ(ಇನ್ಷೂರೆನ್ಸ್ ಪಾಲಿಸಿ)ದ ಕುರಿತು ಮಾಹಿತಿ ಪಡೆಯಲು ಅನುಕೂಲ ಮಾಡುವಂತೆ ತಿಳಿಸಲಾಗಿದೆ. ಆರು ತಿಂಗಳಿಗೊಮ್ಮೆ ತಮ್ಮ ಬಳಿ ಇರುವ ‘ಕ್ಲೇಮ್’ ಆಗದ ವಿಮೆಯ ಮೊತ್ತದ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚಿಸಲಾಗಿದೆ.







