ತುಮಕೂರು ಜಿಲ್ಲಾಧಿಕಾರಿ ಡಾ.ವಿಶಾಲ್ ವರ್ಗಾವಣೆ: ಡಾ.ರಾಕೇಶ್ ಕುಮಾರ್ ನೂತನ ಡಿಸಿ

ತುಮಕೂರು,ಜು.29: ತುಮಕೂರು ಜಿಲ್ಲಾಧಿಕಾರಿಗಳಾಗಿ ಇದುವರೆಗೂ ಕಾರ್ಯನಿರ್ವಹಿಸುತ್ತಿದ್ದ ಡಾ.ವಿಶಾಲ್ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ ಡಾ.ರಾಕೇಶ್‍ಕುಮಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ 2018ರ ಮೇ ನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಇಲಾಖೆಯಲ್ಲಿದ್ದ ಡಾ.ವಿಶಾಲ್ ಅವರನ್ನು ತುಮಕೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಚುನಾವಣೆಯ ಕಾರ್ಯವನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಿದ ಜಿಲ್ಲಾಧಿಕಾರಿಗಳು, ಪೌರಾಕಾರ್ಮಿಕರ ಖಾಯಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟಲ್ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ, ದಿಬ್ಬೂರು ದೇವರಾಜ ಅರಸು ವಸತಿ ಸಂಕೀರ್ಣದ ಮನೆಗಳ ಹಂಚಿಕೆ ಮತ್ತಿತರ ಕೆಲಸಗಳನ್ನು ಕಾನೂನು ಬದ್ದವಾಗಿ ನೆರವೇರಿಸಿ, ಬೀದಿ ಬದಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ವಾಸವಾಗಿದ್ದ ನಿರ್ಗತಿಕರನ್ನು ಗುರುತಿಸಿ ಅವರು ಸರಕಾರದ ಸವಲತ್ತು ಪಡೆಯಲು ಅನುಕೂಲವಾಗುವಂತೆ ತಾತ್ಕಾಲಿಕ ಆಧಾರ್ ಕಾರ್ಡು ಸೃಷ್ಟಿಸಿ, ಸರಕಾರದ ಸವಲತ್ತು ಆರ್ಹರಿಗೆ ದೊರೆಯುವಂತೆ ಕ್ರಮ ಕೈಗೊಂಡು ಜನಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ಇಂದು ರಾಜ್ಯ ಸರಕಾರ ಹೊರಡಿಸಿರುವ ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಓ ಆಗಿರುವ ಡಾ.ಕೆ.ರಾಕೇಶ್ ಕುಮಾರ್ ತುಮಕೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಮೂಲತಃ ಕೋಲಾರ ಜಿಲ್ಲೆ ಬಂಗಾರ ಪೇಟೆಯವರಾದ ಇವರು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರೋಬೇಷನರಿ ಮುಗಿಸಿ, ಕೆಲದಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸಿ, ನಂತರ ಜಿ.ಪಂ.ಸಿಇಓ ಆಗಿ ನೇಮಕಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಸರಕಾರದ ನವೀಕರಿಸಬಹುದಾದ ಇಂಧನಗಳ ವಿಭಾಗದಲ್ಲಿ ನಡೆದ ಗೋಬರ್ ಗ್ಯಾಸ್ ಅವ್ಯವಹಾರವನ್ನು ಪತ್ತೆ ಹಚ್ಚಿದ್ದರು.







