ಸಿಐಸಿಯಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಸರಕಾರದ ಜಾಹೀರಾತು

ಹೊಸದಿಲ್ಲಿ,ಜು.29: ಮಾಹಿತಿ ಹಕ್ಕು ಕಾಯ್ದೆಯಲ್ಲಿ ಉದ್ದೇಶಿತ ಬದಲಾವಣೆಗಳ ಕುರಿತು ವಿವಾದಗಳ ನಡುವೆಯೇ ಸರಕಾರವು ಕೇಂದ್ರಿಯ ಮಾಹಿತಿ ಆಯೋಗ(ಸಿಐಸಿ)ದಲ್ಲಿ ಖಾಲಿಯಿರುವ ಮಾಹಿತಿ ಆಯುಕ್ತರ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು,ಈ ಸಂಬಂಧ ಜಾಹೀರಾತನ್ನು ಹೊರಡಿಸಿದೆ.
ಸಿಐಸಿಯಲ್ಲಿ ಹಾಲಿ ಆರು ಮಾಹಿತಿ ಆಯುಕ್ತರು ಕರ್ತವ್ಯ ನಿರ್ವಹಿಸುತ್ತಿದ್ದು,ಉಳಿದ ನಾಲ್ಕು ಹುದ್ದೆಗಳು ಖಾಲಿಯಿವೆ. ರಾಧಾಕೃಷ್ಣ ಮಾಥೂರ್ ಅವರು ಈಗಿನ ಮುಖ್ಯ ಮಾಹಿತಿ ಆಯುಕ್ತರಾಗಿದ್ದಾರೆ.
ಆರ್‌ಟಿಐ ಕಾಯ್ದೆಯಲ್ಲಿ ಉದ್ದೇಶಿತ ಬದಲಾವಣೆಗಳ ಕುರಿತು ಸರಕಾರವು ವಿರೋಧಗಳನ್ನು ಎದುರಿಸುತ್ತಿದೆ. ಈ ಬದಲಾವಣೆಗಳು ಕಾಯ್ದೆಯನ್ನು ದುರ್ಬಲಗೊಳಿಸುತ್ತವೆ ಎನ್ನುವುದು ಹೆಚ್ಚಿನ ಆರ್‌ಟಿಐ ಕಾರ್ಯಕರ್ತರ ವಾದವಾಗಿದೆ.
ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ವೇತನಗಳು,ಭತ್ಯೆಗಳು,ಅಧಿಕಾರಾವಧಿ,ಇತರ ನಿಬಂಧನೆಗಳು ಮತ್ತು ಸೇವಾನಿಯಮಗಳಿಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಸರಕಾರವು ಉದ್ದೇಶಿಸಿದೆ.
ಆರ್‌ಟಿಐ ಕಾಯ್ದೆಯಲ್ಲಿ ಉದ್ದೇಶಿತ ಬದಲಾವಣೆಗಳು ಸಂಸತ್ತಿನ ಅಂಗೀಕಾರ ಪಡೆಯಬಹುದು ಎನ್ನುವುದನ್ನು ಈ ಜಾಹೀರಾತು ಸ್ಪಷ್ಟ್ಟಗೊಳಿಸಿದೆ ಎಂದು ಹೇಳಿದ ಆರ್‌ಟಿಐ ಕಾರ್ಯಕರ್ತ ಅಜಯ ದುಬೆ ಅವರು,ಕಾಯ್ದೆಯನ್ನು ದುರ್ಬಲಗೊಳಿಸುವ ಸಂಬಂಧಿತ ಅಧಿಕಾರಿಗಳ ಯಾವುದೇ ಪ್ರಯತ್ನದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.







