ಚಿಕ್ಕಮಗಳೂರು: ಹಕ್ಕಿಪಿಕ್ಕಿ ಸಮುದಾಯದವರೊಂದಿಗಿನ ತಹಶೀಲ್ದಾರ್ ಮಾತುಕತೆ ವಿಫಲ
ಜ್ಯೋತಿಷ್ಯಕ್ಕೆ ಹೆದರಿ ಗ್ರಾಮ ತೊರೆದ ಪ್ರಕರಣ

ಚಿಕ್ಕಮಗಳೂರು, ಜು.29: ಮೂಢ ನಂಬಿಕೆಗೆ ಬಲಿಯಾದ ಸಮುದಾಯ ನೂರಾರು ಜನರು ಸಾವಿನ ಭೀತಿಯಿಂದಾಗಿ ತಾವು ವಾಸವಿದ್ದ ಜಾಗ, ಮನೆ, ಆಸ್ತಿಪಾಸ್ತಿ, ಸಾಕು ಪ್ರಾಣಿಗಳನ್ನು ಸ್ಥಳದಲ್ಲೇ ಬಿಟ್ಟು ಗ್ರಹಣದ ಹಿಂದಿನ ದಿನ ರಾತ್ರೋರಾತ್ರಿ ಗ್ರಾಮ ತೊರೆದ್ದಿ ಹಕ್ಕಿಪಿಕ್ಕಿ ಸಮುದಾಯದವರ ಮನವೊಲಿಸಿ ಗ್ರಾಮಕ್ಕೆ ವಾಪಸ್ಸು ಕರೆತರಲು ಮುಂದಾಗಿದ್ದ ಎನ್.ಆರ್.ಪುರ ತಾಲೂಕಿನ ತಹಶೀಲ್ದಾರ್ ಅವರ ಪ್ರಯತ್ನ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಎನ್.ಆರ್.ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಿಗುವಾನಿ ಗ್ರಾಮದಲ್ಲಿ ಕಂದಾಯ ಇಲಾಖೆ ನೀಡಿದ್ದ ಜಾಗದಲ್ಲಿ ಕಳೆದ 25 ವರ್ಷಗಳಿಂದ ವಾಸವಿದ್ದ ಹಕ್ಕಿಪಿಕ್ಕಿ ಹಾಗೂ ಹಾವು ಗೊಲ್ಲ ಸಮುದಾಯದವರು ಕಳೆದ ಗ್ರಹಣದ ಹಿಂದಿನ ದಿನ ಮಲಯಾಳಿ ಮಾಂತ್ರಿಕನ ಜ್ಯೋತಿಷ್ಯ ನಂಬಿ ರಾತ್ರೋರಾತ್ರಿ ಮನೆ, ಜಾಗ, ಜಾನುವಾರುಗಳನ್ನು ಸ್ಥಳದಲ್ಲೇ ಬಿಟ್ಟು ತೀರ್ಥಹಳ್ಳಿಗೆ ಗುಳೇ ಹೋಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕಳೆದ ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ಕಂದಾಯಾಧಿಕಾರಿಗಳು ನಿವಾಸಿಗಳು ಸ್ಥಳ ತೊರೆದಿದ್ದ ಬಗ್ಗೆ ಖಚಿತಪಡಿಸಿಕೊಂಡು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.
ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಎನ್.ಆರ್.ಪುರ ತಹಶೀಲ್ದಾರ್ ಗೋಪಿನಾಥ್ ಎಂಬವರಿಗೆ, ಗ್ರಾಮ ತೊರೆದವರ ಮನವೊಲಿಸಿ ಕರೆತರಲು ಸೂಚಿಸಿದ್ದರೆಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೋಪಿನಾಥ್ ತೀರ್ಥಹಳ್ಳಿ ತಾಲೂಕಿನ ಕೋಟೇಶ್ವರ ಎಂಬಲ್ಲಿ ನೆಲೆಸಿದ್ದ ಹಕ್ಕಿಪಿಕ್ಕಿ ಸಮುದಾಯದ 60 ಕುಟುಂಬಗಳನ್ನು ರವಿವಾರ ಭೇಟಿ ಮಾಡಿ ಗ್ರಾಮಕ್ಕೆ ಬರುವಂತೆ ಮನವೊಲಿಸಿದ್ದರೆನ್ನಲಾಗಿದೆ. ತಹಶೀಲ್ದಾರ್ ಅವರ ಮನವೊಲಿಕೆ ಬಳಿಕವೂ ಸಮುದಾಯದ ಮುಖಂಡರು ತಾವು ಯಾವುದೇ ಕಾರಣಕ್ಕೂ ಆ ಸ್ಥಳಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದು, ತಾಲೂಕಿನಲ್ಲಿ ಬೇರೆಡೆ ಜಾಗ ನೀಡಿದಲ್ಲಿ ಬರುತ್ತೇವೆಂದು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಸಾಕಷ್ಟು ಮೂಢಾಚರಣೆ ಅನುಸರಿಸುತ್ತಿದ್ದ ಈ ಕುಟುಂಬಗಳ ಪೈಕಿ ಕಳೆದ 4 ವರ್ಷಗಳಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿಂತಿತರಾಗಿದ್ದ ಸಮುದಾಯದ ಮುಖಂಡರು ಇತ್ತೀಚೆಗೆ ಮಲಯಾಳಿ ಮಾಂತ್ರಿಕನೊಬ್ಬನ ಬಳಿಗೆ ಹೋಗಿ ತಮ್ಮ ಸಮುದಾಯದಲ್ಲಿ ಹೆಚ್ಚುತ್ತಿರುವ ಸಾವಿನ ರಹಸ್ಯದ ಬಗ್ಗೆ ತಿಳಿಸಿ ಪರಿಹಾರ ಸೂಚಿಸುವಂತೆ ಕೇಳಿಕೊಂಡಿದ್ದರೆನ್ನಲಾಗಿದೆ. ಇದಕ್ಕೆ ಮಲಯಾಳಿ ಜ್ಯೋತಿಷಿಯು, ಇಡೀ ಸಮುದಾಯದ ಜನರು ಗ್ರಹಣದ ಒಳಗಾಗಿ ಗ್ರಾಮವನ್ನು ತೊರೆದು ಬೇರೆಡೆಗೆ ಹೋಗಬೇಕು. ತಪ್ಪಿದಲ್ಲಿ ಸಾವಿನ ಸಂಖ್ಯೆ ಹೆಚ್ಚಲಿದೆ. ಗ್ರಹಣದ ದಿನ ಗ್ರಾಮದಲ್ಲಿ ಮೂವರು ಸಾವನ್ನಪ್ಪಲಿದ್ದಾರೆ. ಉಳಿದವರು ರಕ್ತಕಾರಿ ಸಾಯಲಿದ್ದಾರೆಂದು ಹೇಳಿ ಹೆದರಿಸಿದ್ದ ಎಂದು ತಿಳಿದು ಬಂದಿದೆ.
ಮಲಯಾಳಿ ಮಾಂತ್ರಿಕನ ಮಾತು ನಂಬಿದ ಸಮುದಾಯದ ಎಲ್ಲ ಸದಸ್ಯರು ಕಳೆದ ಶುಕ್ರವಾರ ಗ್ರಹಣದ ಹಿಂದಿನ ದಿನ ಗುರುವಾರ ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿಕೊಂಡು ತಾಲೂಕಿನ ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಗುಳೇ ಹೋಗಿದ್ದರು. ಗ್ರಾಮದಲ್ಲಿ ಈ ಸಮುದಾಯದ ಸುಮಾರು 60 ಮನೆಗಳಿದ್ದು, ಬಹುತೇಕ ಕುಟುಂಬಗಳು ಗುಡಿಸಲುಗಳಲ್ಲಿಯೇ ವಾಸವಿದ್ದರು. ಗುರುವಾರ ರಾತ್ರೋರಾತ್ರಿ ಗ್ರಾಮ ತೊರೆಯುವ ಮುನ್ನ ನಿವಾಸಿಗಳು ತಾವು ಸಾಕುತ್ತಿದ್ದ ನಾಯಿ, ಹಂದಿ, ಕುರಿ, ಕೋಳಿ ಮತ್ತಿತರ ಪ್ರಾಣಿ, ಪಕ್ಷಿಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು.
ಎನ್.ಆರ್.ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಿಗುವಾನಿ ಗ್ರಾಮದಲ್ಲಿ ಕಂದಾಯ ಇಲಾಖೆ ನೀಡಿದ್ದ ಜಾಗದಲ್ಲಿ ಕಳೆದ 25 ವರ್ಷಗಳಿಂದ ವಾಸವಿದ್ದ ಹಕ್ಕಿಪಿಕ್ಕಿ ಹಾಗೂ ಹಾವು ಗೊಲ್ಲ ಸಮುದಾಯದವರು ಮೂಲತಃ ಬೇರೆಡೆಯಿಂದ ತಾಲೂಕಿಗೆ ವಲಸೆ ಬಂದಿದ್ದರು. ಇವರಿಗೆ ತಾಲೂಕು ಆಡಳಿತ ಬಾಳೆ ಗ್ರಾಪಂ ವ್ಯಾಪ್ತಿಯ ಸುಗವಾನಿ ಗ್ರಾಮದ ಬಿ.ಎಚ್.ಕೈಮರ ಸರ್ಕಲ್‍ನಲ್ಲಿ ನಿವೇಶನಗಳನ್ನು ನೀಡಿದ್ದರಿಂದ ಸಮುದಾಯದ 60 ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೆಲೆ ಕಂಡು ಕೊಂಡಿದ್ದವು. ಆರಂಭದಲ್ಲಿ ಜೀವನೋಪಾಯಕ್ಕಾಗಿ ಕಾಡು ಕೋಣಿಯಂತಹ ಪಕ್ಷಿ, ಹಕ್ಕಿಗಳನ್ನು ಭೇಟೆಯಾಡಿ ಮಾರಾಟ ಮಾಡುತ್ತಿದ್ದ ಈ ಸಮುದಾಯದವರು ಇತ್ತೀಚೆಗೆ ಸಮೀಪದ ಕಾಫಿ, ಅಡಿಕೆ, ರಬ್ಬರ್ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದುಗಳಿಸುತ್ತಾ ಜೀವನ ನಿರ್ವಹಿಸುತ್ತಿದ್ದರು. ಈ ಕುಟುಂಬಗಳಿಗೆ ತಾಲೂಕು ಆಡಳಿತ ಪಡಿತರ ಚೀಟಿ, ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಗ್ರಾಪಂ ವತಿಯಿಂದ ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಆದರೆ ನಿವಾಸಿಗಳು ವಾಸವಿರುವ ಜಾಗ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಗೊಂದಲಗಳಿಂದಾಗಿ ನಿವೇಶನಗಳಿಗೆ ಇನ್ನೂ ಹಕ್ಕು ಪತ್ರ ನೀಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಈ ಕುಟುಂಬಗಳಿಗೆ ಆಶ್ರಯಮನೆಗಳ ಸೌಲಭ್ಯ ನೀಡಲು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯ ಬಾಳೆ ಗ್ರಾಪಂ ಸದಸ್ಯ ಕ್ಸೇವಿಯರ್ ಪತ್ರಿಕೆ ಮಾಹಿತಿ ನೀಡಿದ್ದಾರೆ.







