ಬಿಹಾರದ ಆಶ್ರಮದಲ್ಲಿ ಲೈಂಗಿಕ ಹಗರಣ: ತನಿಖೆ ಕೈಗೆತ್ತಿಕೊಂಡ ಸಿಬಿಐ

ಹೊಸದಿಲ್ಲಿ, ಜು.29: ಬಿಹಾರದ ಮುಝಫರ್‌ಪುರ ಜಿಲ್ಲೆಯ ಆಶ್ರಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಮುಝಫರ್‌ಪುರದ ಬಾಲಿಕಾಗೃಹದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯರ ಮೇಲೆ ಬಾಲಿಕಾಗೃಹದ ಉಸ್ತುವಾರಿ ವಹಿಸಿದ್ದ ಸೇವಾ ಸಂಕಲ್ಪ ಏವಂ ವಿಕಾಸ ಸಮಿತಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕ, ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮುಂಬೈ ಮೂಲದ ಆಡಿಟ್ ಸಂಸ್ಥೆಯೊಂದು ಕೆಲ ತಿಂಗಳ ಹಿಂದೆ ಬಾಲಿಕಾಗೃಹದ ವಾರ್ಷಿಕ ಲೆಕ್ಕಪತ್ರ ಪರಿಶೋಧನೆಗೆಂದು ಆಗಮಿಸಿದ್ದಾಗ ಕೆಲ ಬಾಲಕಿಯರು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಬಾಲಕಿಯರ ದೂರನ್ನು ಲೆಕ್ಕಪತ್ರ ವರದಿಯ ಜೊತೆ ಸೇರಿಸಿ ಬಿಹಾರ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಲಾಖೆಯು ಎಫ್‌ಐಆರ್ ದಾಖಲಿಸಿ ದೂರಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿತ್ತು. ಬಳಿಕ ಬಾಲಿಕಾಗೃಹದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎನ್‌ಜಿಒ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಬಾಲಕಿಯರನ್ನು ಪಾಟ್ನಾ ಮತ್ತು ಮಧುಬನಿಗೆ ಸ್ಥಳಾಂತರಿಸಲಾಗಿತ್ತು. ಎನ್‌ಜಿಒ ಸಂಸ್ಥೆಯ ಮಾಲಕ ಬೃಜೇಶ್ ಠಾಕೂರ್, ಬಾಲಿಕಾಗೃಹದ ಮಹಿಳಾ ಸಿಬ್ಬಂದಿಗಳ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.





