ದಿಲ್ಲಿ: ಅಪಾಯದ ಮಟ್ಟ ಮೀರಿದ ಯಮುನಾ ನದಿ
1 ಸಾವಿರ ಕುಟುಂಬಗಳ ಸ್ಥಳಾಂತರ

ಹೊಸದಿಲ್ಲಿ, ಜು.29: ದಿಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ದಿಲ್ಲಿ ಸರಕಾರ 1,000ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ.
ಹರ್ಯಾನವು ಹಾಥಿಕುಂಡ್ ಅಣೆಕಟ್ಟಿನಿಂದ 6 ಲಕ್ಷ ಕ್ಯುಸೆಕ್ಸ್ ನೀರನ್ನು ಹೊರಬಿಟ್ಟಿರುವ ಕಾರಣ ರವಿವಾರ ಯಮುನಾ ನದಿ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾಗಿದೆ. ರವಿವಾರ ದಿಲ್ಲಿಯಲ್ಲಿ ಯಮುನಾ ನದಿಯಲ್ಲಿ ನೀರಿನ ಪ್ರಮಾಣ 205.46 ಮೀಟರ್ ಆಗಿದ್ದು ಇಲ್ಲಿ ಅಪಾಯದ ಮಟ್ಟ 204.83 ಮೀಟರ್ ಆಗಿದೆ. ಜುಲೈ 31ರಂದು ನೀರಿನ ಮಟ್ಟ 206.60ಕ್ಕೇರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿಗೆ ಕುಡಿಯುವ ನೀರನ್ನು ಒದಗಿಸುವ ಹಾಥಿಕುಂಡ್ ಅಣೆಕಟ್ಟಿನಿಂದ ಬಿಡುಗಡೆ ಮಾಡುವ ನೀರು ದಿಲ್ಲಿಗೆ 3 ದಿನದಲ್ಲಿ ತಲುಪುತ್ತದೆ. ಅಣೆಕಟ್ಟಿನಿಂದ ಪ್ರತೀ ಗಂಟೆಗೊಮ್ಮೆ ನೀರನ್ನು ಹೊರಬಿಡುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಪೂರ್ವ ವಲಯದಲ್ಲಿ ಸುಮಾರು 1,000 ಮಂದಿಗೆ ಸ್ಥಳಾವಕಾಶ ಒದಗಿಸುವ ಸಾಮರ್ಥ್ಯವಿರುವ 750ರಷ್ಟು ಶಿಬಿರಗಳನ್ನು ನಿರ್ಮಿಸಲಾಗಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವವರನ್ನು ಸಮೀಪದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದ್ದೇವೆ. ತುರ್ತು ಪರಿಸ್ಥಿತಿ ಎದುರಿಸಲು ಕ್ಷಿಪ್ರ ಕಾರ್ಯಪಡೆ ಹಾಗೂ ದೋಣಿಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಪ್ರೀತ್ ವಿಹಾರ್ ವಿಭಾಗದ ನೋಡಲ್ ಅಧಿಕಾರಿ ಅರುಣ್ ಗುಪ್ತ ತಿಳಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಶನಿವಾರ ಅಧಿಕಾರಿಗಳ ಸಭೆ ಕರೆದು ಪರಿಸ್ಥಿತಿಯ ಅವಲೋಕನ ನಡೆಸಿದರು.







