ಹನೂರು: ಮಲೈಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಎನ್.ಮಹೇಶ್
ಹನೂರು,ಜು.29: ಸಚಿವರಾದ ನಂತರ ಪ್ರಥಮ ಬಾರಿಗೆ ಶಿಕ್ಷಣ ಸಚಿವ ಎನ್.ಮಹೇಶ್ ರವರು ಮಲೈಮಹದೇಶ್ವರ ಬೆಟ್ಟಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಿದರು.
ಶನಿವಾರ ರಾತ್ರಿ ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಸಚಿವ ಎನ್.ಮಹೇಶ್ ಮಲೈಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಸಂಕಮ್ಮ ನಿಲಯದಲ್ಲಿ ಆಯೋಜಿಸಿದ್ದ ದಕ್ಷಯಜ್ಞ ನಾಟಕವನ್ನು ಉದ್ಘಾಟಿಸಿದರು. ನಂತರ ಬೆಟ್ಟದಲ್ಲಿ ವಾಸ್ತವ್ಯ ಹೂಡಿ ಮುಂಜಾನೆ ಸ್ವಾಮಿ ದರ್ಶನ ಪಡೆದು ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳ ಸ್ಥಳಕ್ಕೆ ಅಧಿಕಾರಿಗಳ ಜೊತೆ ಬೇಟಿ ನೀಡಿ ಮಾಹಿತಿ ಪಡೆದರು.
ನಾಗಮಲೆ ಭವನದಲ್ಲಿ ಮಲೈಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ ಕಾರ್ಯದರ್ಶಿ ಎಂ .ಜೆ ರೂಪರವರಿಂದ ಮಲೈಮಹದೇಶ್ವರ ಬೆಟ್ಟದ ಸಮಗ್ರ ಅಭಿವೃದ್ದಿ ಚಿತ್ರಣವನ್ನು ಸಿಪಿಟಿಯ ಮುಖಾಂತರ ವೀಕ್ಷಿಸಿದರು. ನಂತರ ಸಾಲೂರು ಮಠಕ್ಕೂ ಸಹ ಭೇಟಿ ನೀಡಿ ಬೃಹನ್ಮಠದ ಪಟ್ಟದ ಗುರುಸ್ವಾಮಿಗಳ ಜೊತೆ ಮಲೈಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳು, ಶಾಲೆಗಳ ಸ್ಥಿತಿಗತಿಗಳ ಕುರಿತು ಚರ್ಚಿಸಿ ಮಾಹಿತಿ ಪಡೆದರು.