ದಾವಣಗೆರೆ: ತೋಟಗಾರಿಕೆ ಇಲಾಖೆ ವತಿಯಿಂದ ತಳ್ಳು ಗಾಡಿ ವಿತರಣೆ

ದಾವಣಗೆರೆ,ಜು.29: ತೋಟಗಾರಿಕೆ ಎಂದರೆ ಕೇವಲ ಶ್ರೀಮಂತ ರೈತರಿಗೆ ಮಾತ್ರ ಎಂಬುದನ್ನು ಅಳಿಸಿ ಪ್ರತಿಯೊಬ್ಬ ರೈತರಿಗೂ, ಜನ ಸಾಮಾನ್ಯರಿಗೂ ಇದೆ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ನಮಗಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ 11 ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆ ವತಿಯಿಂದ ತರಕಾರಿ ಮತ್ತು ಸೊಪ್ಪು ಮಾರಾಟಗಾರರಿಗೆ ತಳ್ಳುವ ಗಾಡಿಗಳನ್ನು ವಿತರಿಸಿ ಅವರು ಮಾತನಾಡಿದರು.
ನಾನು ಮೊದಲ ಬಾರಿಗೆ ಸಚಿವನಾದ ನಂತರ ತೋಟಗಾರಿಕೆ ಖಾತೆ ನೀಡಿದ ವೇಳೆ ಮೂಗು ಮುರಿದವರೇ ಹೆಚ್ಚು. ಆದರೆ ನಾನು ಮಾತ್ರ ಈ ಇಲಾಖೆಯಿಂದ ಜನಸಾಮಾನ್ಯರಿಗೆ ಏನು ಉಪಯೋಗವಾಗಲಿದೆ ಎಂಬುದನ್ನು ತಿಳಿದು ಅದನ್ನು ತಲುಪಿಸಿ ಜನಸಾಮಾನ್ಯರಿಗೂ ತೋಟಗಾರಿಕೆ ಇಲಾಖೆ ಇದೆ ಎಂಬುದನ್ನು ತೋರಿಸಿಕೊಟ್ಟೆ ಎಂದರು.
ಸಣ್ಣ ಮತ್ತು ಅತಿಸಣ್ಣ ರೈತರಿಗೆ ತೋಟಗಾರಿಕೆಯಿಂದ ನಷ್ಟ ಇಲ್ಲ ಎಂಬುದನ್ನು ತಿಳಿಸಿ ಸಾಕಷ್ಟು ಸೌಲಭ್ಯ ನೀಡಲಾಗಿದೆ. ಅದೇ ರೀತಿ ನಗರ ಪ್ರದೇಶಗಳ ಜನತೆಗೂ ಸಹ ತೋಟಗಾರಿಕೆ ಇಲಾಖೆಯಿಂದ ನಿಮ್ಮ ಮನೆ ಬಾಗಿಲಿಗೆ ತಾರಸಿ ಮತ್ತು ಕೈತೋಟದಲ್ಲಿ ಆರೋಗ್ಯಕರ ಬೆಳೆ ಬೆಳೆಯಲು ಕಿಟ್ ಒದಗಿಸುವ ಮೂಲಕ ಪ್ರತಿಯೊಬ್ಬರಿಗೂ ತೋಟಗಾರಿಕೆ ಸೌಲಭ್ಯ ದೊರೆಯುವಂತೆ ಮಾಡಲಾಗಿದೆ ಎಂದರು.
ದಾವಣಗೆರೆಯಲ್ಲಿ ಇದುವರೆಗೂ 500 ಕ್ಕೂ ಹೆಚ್ಚು ತಳ್ಳುವ ಗಾಡಿಗಳನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದೆ. ಇನ್ನು ಎಷ್ಟೇ ಫಲಾನುಭವಿಗಳು ಬಂದರೂ ತಳ್ಳುವ ಗಾಡಿಗಳನ್ನು ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ವೇದಮೂರ್ತಿ, ಯತಿರಾಜ್, ಮಹಾನಗರ ಪಾಲಿಕೆ ಸದಸ್ಯ ಎಚ್.ಬಿ.ಗೋಣೆಪ್ಪ, ಸುರೇಶ್ ಶೆಟ್ಟಿ, ಅಜ್ಜಣ್ಣ, ಶ್ರೀದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳು, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯವರು ಮತ್ತಿತರರಿದ್ದರು.
ಕೊಡಬಾಳ್ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಕರಿಬಸಪ್ಪ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.







