ಕತ್ತಲ ಭಾರತದ ಕಡೆ ಮಾಧ್ಯಮಗಳು ಮುಖ ಮಾಡಬೇಕು: ಪ್ರೊ.ಮಹೇಶ್ಚಂದ್ರ ಗುರು ಕರೆ
ಮಡಿಕೇರಿಯಲ್ಲಿ ಪತ್ರಿಕಾ ದಿನಾಚರಣೆ

ಮಡಿಕೇರಿ, ಜು. 29: ಕತ್ತಲ ಭಾರತದ ಕಡೆ ಮಾಧ್ಯಮಗಳು ಮುಖ ಮಾಡಿದಾಗ ಮಾತ್ರ ಮಾಧ್ಯಮದ ವ್ಯಕ್ತಿತ್ವ ಹೆಚ್ಚಾಗಲು ಸಾಧ್ಯ ಎಂದು ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರ ಗುರು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್‍ನ ಸಂಯುಕ್ತಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮ ಕ್ಷೇತ್ರ ಇಡೀ ಜಗತ್ತನ್ನು ಗಮನ ಸೆಳೆಯುವಂತಹ ಕ್ಷೇತ್ರವಾಗಿದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಅಂದಿನ ಕಾಲದಲ್ಲಿ ಪತ್ರಿಕೆ ವೃತ್ತಿಯಾಗಿತ್ತು. ಆದರೆ ಪ್ರಸ್ತುತ ಮಾಧ್ಯಮಗಳು ಉದ್ದಿಮೆಯಾಗಿ ಮಾರ್ಪಟ್ಟಿರುವುದಲ್ಲದೆ ಮಾರುಕಟ್ಟೆಯ ಹಿಡಿತಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಗಳು ಅತ್ಯಂತ ಪ್ರತಿಭಾವಂತ ಮತ್ತು ಪ್ರಭಾವೀ ಕ್ಷೇತ್ರವಾಗಿದೆ. ಆದ್ದರಿಂದ ಮಾಧ್ಯಮ ಲೋಕ ಕತ್ತಲು ಮತ್ತು ಸಂಕಷ್ಟದ ಕಡೆ ನೋಡಿದಾಗ ಮಾತ್ರ ಅದರ ತೂಕ ಮತ್ತಷ್ಟು ಹೆಚ್ಚಾಗಲು ಸಾಧ್ಯ. ಧಾರ್ಮಿಕ ಚಿಂತನೆ, ಆಚಾರ, ವಿಚಾರಗಳನ್ನು ವಿರೂಪಗೊಳಿಸಬಾರದು ಎಂದು ಸಲಹೆ ನೀಡಿದ ಪ್ರೊ.ಮಹೇಶ್ಚಂದ್ರ ಗುರು, ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ಪ್ರತಿಯೊಂದು ವಿಚಾರದಲ್ಲೂ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಜನರನ್ನು ಶೋಷಣೆ ಮುಕ್ತರನ್ನಾಗಿ ಮಾಧ್ಯಮಗಳು ಮಾಡಬೇಕೆ ಹೊರತು ವ್ಯಕ್ತಿಗಳ ವೈಯಕ್ತಿಕ ವಿಚಾರಗಳನ್ನು ಬಿತ್ತರಿಸುವ ಮೂಲಕ ಮತ್ತಷ್ಟು ಶೋಷಣೆಗೆ ಒಳಪಡಿಸುವ ಕೆಲಸನ್ನು ಮಾಡಬಾರದು. ಪ್ರತಿಯೊಂದು ವಿಚಾರದಲ್ಲೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದ್ದು, ದುಡಿಮೆ, ಪರಿಶ್ರಮ, ಬಂಧುತ್ವದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು ತಿಳಿಸಿದರು.
ಸುವರ್ಣ ವಾಹಿನಿಯ ಸಂಪಾದಕರಾದ ಅಜಿತ್ ಹನುಮಕ್ಕನವರ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ ಇಂದು ಸಮಾಜದ ಜವಾಬ್ದಾರಿಯನ್ನು ನೆನಪಿಸುವ ಕಾರ್ಯವನ್ನು ಮಾಧ್ಯಮಗಳು ಮಾಡುತ್ತಿವೆ. ಮಾಧ್ಯಮಗಳು ಇಂದಿನ ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಬದಲಾಗಬೇಕು ಎನ್ನುವುದಕ್ಕಿಂತ ಜನರ ಅಭಿರುಚಿಗಳು ಬದಲಾಗಬೇಕಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ.ಆರ್.ಕುಟ್ಟಪ್ಪ ಮಾತನಾಡಿ ಮಾಧ್ಯಮಗಳು ಕೇವಲ ನಡೆಯುತ್ತಿರುವ ವಿದ್ಯಾಮಾನವನ್ನು ಮಾತ್ರ ಚಿತ್ರಣ ಮಾಡುತ್ತಿಲ್ಲ. ಬದಲಾಗಿ ಜನರ ಇಚ್ಛೆಗಳಿಗನುಸಾರವಾಗಿ ಕಾರ್ಯಕ್ರಮವನ್ನು ಬಿತ್ತರಿಸುತ್ತಿವೆ. ಪತ್ರಕರ್ತರು ಸುದ್ದಿಗೆ ಮಾತ್ರ ಸೀಮಿತವಾಗಿರದೆ ಸಮಾಜದ ಪರಿವರ್ತನೆಗೆ ಈ ಕ್ಷೇತ್ರವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ಮಾತನಾಡಿ, ಸಮಾಜದಲ್ಲಿರುವ ಏರುಪೇರುಗಳನ್ನು ಗುರುತಿಸಿ ಅದಕ್ಕೆ ಸ್ಪಂದಿಸುವ ಮನಸ್ಸು ಸೃಷ್ಟಿಯಾಗಬೇಕಿದೆ, ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳುವ ಮೂಲಕ ಯಶಸ್ಸು ಕಾಣಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್.ಸುಬ್ರಮಣಿ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







