ಜಾಗತಿಕ ಕೃಷಿ ಬಿಕ್ಕಟ್ಟು ಪರಿಹಾರಕ್ಕೆ ನೈಸರ್ಗಿಕ ಕೃಷಿ ಅವಶ್ಯ: ಸುಭಾಷ್ ಪಾಳೇಕರ್
ಬೆಂಗಳೂರು, ಜು. 29: ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಲ್ಲಿ ರೈತರು ತೊಡಗಿದರೆ ಜಾಗತಿಕ ಕೃಷಿ ಬಿಕ್ಕಟ್ಟಿಗೆ ಪರ್ಯಾಯವಾಗಲಿದೆ ಎಂದು ಝಡ್ ಬಿ ಎನ್‌ಎಫ್ ಚಳವಳಿಯ ಸ್ಥಾಪಕ ಸುಭಾಷ್ ಪಾಳೇಕರ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಗಾಂಧಿ ಭವನದಲ್ಲಿ ಝಡ್‌ಬಿಎನ್‌ಎಫ್ ಚಳವಳಿ ಕರ್ನಾಟಕ ಆಯೋಜಿಸಿದ್ದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯ ರಾಜ್ಯಮಟ್ಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಮ್ಮ ಹಿರಿಯ ತಲೆ ಮಾರಿನ ರೈತರು ಸಂಗ್ರಹಿಸುತ್ತಾ ಬಂದಿರುವ ಹತ್ತಿ ಬೀಜ, ಜೋಳದ ಬೀಜ, ರಾಗಿ ಬೀಜ ಸೇರಿ ಇತರೆ ಬೀಜಗಳನ್ನು ನಾವೂ ಸಂಗ್ರಹಿಸಿಟ್ಟು ಜಮೀನಿನಲ್ಲಿ ಬೆಳೆ ಬೆಳೆಯಬೇಕು. ಹಾಗೂ ಜಮೀನುಗಳಿಗೆ ಯಾವುದೆ ಕಾರಣಕ್ಕೂ ರಾಸಾಯನಿಕ ಗೊಬ್ಬರಗಳನ್ನು ಹಾಕದೆ ಸಾವಯವ ಗೊಬ್ಬರವನ್ನು ಹಾಕಿ ಜಾಗತಿಕ ಕೃಷಿ ಬಿಕ್ಕಟ್ಟಿಗೆ ಪರ್ಯಾಯ ಕಂಡುಕೊಳ್ಳಬೇಕೆಂದು ತಿಳಿಸಿದರು.
ಪೂರೈಕೆ ಹೆಚ್ಚಾದಾಗ ಮಾರುಕಟ್ಟೆಯಲ್ಲಿ ಕೃಷಿಕರ ಬೆಳೆಗಳಿಗೆ ಬೆಲೆ ಇರುವುದಿಲ್ಲ. ಹೀಗಾಗಿ, ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಬೆಲೆ ಬರುವ ತನಕ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು. ಇದರಿಂದ, ರೈತರ ಕುಟುಂಬಗಳು ಆರ್ಥಿಕ ಸ್ವಾಲಂಬಿಗಳಾಗುತ್ತವೆ. ಕೆಲ ವ್ಯಾಪಾರಸ್ಥರು ಗ್ರಾಹಕರನ್ನು ಮೋಸಗೊಳಿಸುವುದಕ್ಕಾಗಿಯೇ ವಿದೇಶಿ ಹಣ್ಣು ಹಂಪಲು, ದವಸ ಧಾನ್ಯಗಳನ್ನು ಸ್ವದೇಶಿ ಧಾನ್ಯಗಳೆಂದು ಬಿಂಬಿಸಲು ಹೊರಟಿದ್ದು, ನಾವುಗಳು ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಪ್ರಸ್ತುತ ಆಡಳಿತದಲ್ಲಿ ಇರುವ ರಾಜ್ಯ ಸರಕಾರವು ನೈಸರ್ಗಿಕ ಕೃಷಿಗಾಗಿ ಆಯವ್ಯಯದಲ್ಲಿ 50 ಕೋಟಿ ರೂ.ಮೀಸಲಿಟ್ಟಿದ್ದು, ಕರ್ನಾಟಕ ಕೂಡ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಪ್ರೋತ್ಸಾಹಿಸುತ್ತಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ಮೇಘಾಲಯ ರಾಜ್ಯಗಳು ಈಗಾಗಲೇ ನೈಸರ್ಗಿಕ ಕೃಷಿಗೆ ಒತ್ತು ನೀಡಿವೆ. ಕೃಷಿ ವಿಜ್ಞಾನಿಗಳು ಸರಕಾರಿ ವೇತನವನ್ನು ಪಡೆಯಲು ಮಾತ್ರ ಸೀಮಿತವಾಗಿದ್ದು, ಅವರಲ್ಲಿ ಯಾವುದೆ ಸಮಸ್ಯೆಗೆ ಪರಿಹಾರವಿಲ್ಲ ಎಂದು ಕಿಡಿಕಾರಿದರು.







