ವಿಂಡೀಸ್ ವಿರುದ್ಧ ಏಕದಿನ ಸರಣಿ ಜಯಿಸಿದ ಬಾಂಗ್ಲಾದೇಶ

ಬಾರ್ಬಡೊಸ್, ಜು.29: ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಸರಣಿಯಲ್ಲಿ ಗಳಿಸಿದ ಮತ್ತೊಂದು ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯವನ್ನು 18 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
ಶನಿವಾರ ನಡೆದ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಬಾಂಗ್ಲಾದೇಶ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ ತಮೀಮ್ ಶತಕ(103, 124 ಎಸೆತ) ಹಾಗೂ ಮಹ್ಮೂದುಲ್ಲಾ(67,49 ಎಸೆತ) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 301 ರನ್ ಕಲೆಹಾಕಿತು.
ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದಿದ್ದ ವಿಂಡೀಸ್‌ಗೆ ಕ್ರಿಸ್ ಗೇಲ್(73, 66 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಎವಿನ್ ಲೂಯಿಸ್(13,33 ಎಸೆತ)ಮೊದಲ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿ ಸಾಧಾರಣ ಆರಂಭ ನೀಡಿದರು. ಆದರೆ, ಮಧ್ಯಮ ಓವರ್‌ನಲ್ಲಿ ವಿಂಡೀಸ್‌ನ ರನ್‌ರೇಟ್ ಕುಸಿತ ಕಂಡಿತು. ರೊವ್‌ಮನ್ ಪೊವೆಲ್(74,41 ಎಸೆತ, 5 ಬೌಂಡರಿ, 4 ಸಿಕ್ಸರ್)ಹಾಗೂ ಹೋಪ್(64,94 ಎಸೆತ, 5 ಬೌಂಡರಿ) ಸಾಹಸದ ಹೊರತಾಗಿಯೂ ಆತಿಥೇಯ ತಂಡ 6 ವಿಕೆಟ್‌ಗಳ ನಷ್ಟಕ್ಕೆ 283 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿದ್ದ ಬಾಂಗ್ಲಾದೇಶ ಏಕದಿನ ಸರಣಿ ಗೆದ್ದುಕೊಳ್ಳಲು ಯಶಸ್ವಿಯಾಗಿದೆ. 9 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಬಾಂಗ್ಲಾ ಏಕದಿನ ಸರಣಿ ಗೆದ್ದುಕೊಂಡಿದೆ.
ತಮೀಮ್ ಟೆಸ್ಟ್ ಸರಣಿಯಲ್ಲಿ ಮಿಂಚಲಿಲ್ಲ. ಆದರೆ, ಏಕದಿನ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮೊದಲ ಏಕದಿನದಲ್ಲಿ ಔಟಾಗದೆ 130 ರನ್ ಗಳಿಸಿದ್ದ ತಮೀಮ್ ಎರಡನೇ ಏಕದಿನದಲ್ಲಿ 54 ರನ್ ಗಳಿಸಿದ್ದರು. ಮೂರನೇ ಏಕದಿನದಲ್ಲಿ 38ನೇ ಓವರ್‌ನಲ್ಲಿ 11ನೇ ಶತಕ ಪೂರೈಸಿದ ತಮೀಮ್ ಮುಂದಿನ ಓವರ್‌ನಲ್ಲಿ ಔಟಾದರು. 124 ಎಸೆತಗಳನ್ನು ಎದುರಿಸಿದ್ದ ತಮೀಮ್ 103 ರನ್‌ಗೆ ಔಟಾಗುವ ಮೊದಲು 2 ಸಿಕ್ಸರ್ ಹಾಗೂ 7 ಬೌಂಡರಿ ಸಿಡಿಸಿದರು.
ತಮೀಮ್ ಹಾಕಿಕೊಟ್ಟ ಬುನಾದಿಯ ನೆರವಿನಿಂದ ಮಹ್ಮೂದುಲ್ಲಾ ಹಾಗೂ ನಾಯಕ ಮಶ್ರಾಫೆ ಮುರ್ತಝಾ ವಿಂಡೀಸ್‌ನ್ನು ಚೆನ್ನಾಗಿ ದಂಡಿಸಿದರು. ಮುರ್ತಝಾ 25 ಎಸೆತಗಳಲ್ಲಿ 36 ರನ್ ಗಳಿಸಿದರು. ಮಹ್ಮೂದುಲ್ಲಾ(67,49 ಎಸೆತ,5 ಬೌಂಡರಿ, 3 ಸಿಕ್ಸರ್) ಬಾಂಗ್ಲಾದೇಶ ತಂಡ ವಿಂಡೀಸ್ ವಿರುದ್ಧ ಏಕದಿನದಲ್ಲಿ ಗರಿಷ್ಠ ಸ್ಕೋರ್ ಗಳಿಸಲು ನೆರವಾದರು. ವಿಂಡೀಸ್ ಮೊದಲ ಏಕದಿನದಲ್ಲಿ 279 ರನ್ ಚೇಸಿಂಗ್ ಮಾಡಲು ವಿಫಲವಾಗಿತ್ತು. ಆದರೆ, ಎರಡನೇ ಏಕದಿನದಲ್ಲಿ 3 ರನ್‌ಗಳ ರೋಚಕ ಜಯ ಸಾಧಿಸಿತ್ತು. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯು ವಾರ್ನರ್ ಪಾರ್ಕ್ ನಲ್ಲಿ ಮಂಗಳವಾರದಿಂದ ಆರಂಭವಾಗಲಿದೆ.







