ತುಮಕೂರು: ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಸಂಸ ಧರಣಿ

ತುಮಕೂರು,ಜು.30: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಸಮ್ಮಿಶ್ರ ಸರಕಾರ ಶಿಫಾರಸ್ಸು ಮಾಡದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಎರಡು ಪಕ್ಷಗಳನ್ನು ದೂರ ಇಡಬೇಕಾಗುತ್ತದೆ ಎಂದು ಡಿಎಸ್‍ಎಸ್ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹಮ್ಮಿಕೊಂಡಿದ್ದ ಬೃಹತ್ ತಮಟೆ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಸರಕಾರ ಇದ್ದಾಗ ರಚನೆಯಾದ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲು ಎಲ್ಲ ಸರಕಾರಗಳು ತಾತ್ಸಾರ ತೋರುತ್ತಿವೆ. ಇದೇ ರೀತಿ ತಾತ್ಸಾರ ಮನೋಭಾವನೆ ತೋರಿದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪ್ರತಿಫಲವನ್ನು ಎದುರಿಸಬೇಕಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಒಳ ಮೀಸಲಾತಿ ಶಿಫಾರಸ್ಸು ಮಾಡುವ ನಾಟಕವನ್ನಾಡಿದ್ದರಿಂದ ಇಂದು ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರಕಾರ ರಚನೆಯಾಗಿದೆ. ಸಣ್ಣ ಜಾತಿಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ರಾಜಕಾರಣಿಗಳಿಂದಲೇ ಪರಮೇಶ್ವರ್ ಸೇರಿದಂತೆ ದಲಿತ ಸಮುದಾಯದ ನಾಯಕರುಗಳಿಗೆ ಉನ್ನತ ಸ್ಥಾನಮಾನ ಸಿಗುತ್ತಿಲ್ಲ. ಪರಮೇಶ್ವರ್ ಅವರು ಸಿಎಂ ಆಗುವುದನ್ನು ತಪ್ಪಿಸಿದರು. ಪರಮೇಶ್ವರ್ ಎಂದು ಒಳ ಮೀಸಲಾತಿಗೆ ವಿರೋಧವನ್ನು ತೋರಲಿಲ್ಲ ಎಂದು ತಿಳಿಸಿದರು.
ರಾಜಕೀಯದಲ್ಲಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಪರಿಶಿಷ್ಟ ಜಾತಿಗೆ ಮೀಸಲಿರುವ ಶೇ.15ರಷ್ಟು ಮೀಸಲಾತಿಯಲ್ಲಿ ಹೊಲೆ ಮಾದಿಗರಿಗೆ ಸಿಗುತ್ತಿರುವುದು ಶೇ.1.5ರಷ್ಟು ಮೀಸಲಾತಿ ಮಾತ್ರ ಎಂಬುದು ವರದಿಗಳಿಂದ ಬಹಿರಂಗವಾಗಿದೆ. ಅ ಕಾರಣಕ್ಕಾಗಿಯೇ ಜನಸಂಖ್ಯೆ ಆಧಾರಿತ ಮೀಸಲಾತಿ ವರ್ಗೀಕರಣಕ್ಕೆ ಶಿಫಾರಸ್ಸು ಮಾಡಿರುವ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡುವ ಹೊಲೆ-ಮಾದಿಗರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದರು.
ದಲಿತರಿಗೆ ಸಿಗಬೇಕಾದ ಹಕ್ಕುಗಳು ದೊರೆಯುತ್ತಿಲ್ಲ. ಜಿಲ್ಲಾಧಿಕಾರಿಗಳು ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸಿ ದಲಿತರಿಗೆ ನ್ಯಾಯ ಒದಗಿಸದಿದ್ದರೆ ಮುಂದೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂಬಂಧ ದಲಿತರ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಕೇಬಲ್ ರಘುಕುಮಾರ್, ಜಿಲ್ಲಾ ಸಂಚಾಲಕರಾದ ಮರಳೂರು ಕೃಷ್ಣಮೂರ್ತಿ, ಗಾಂಧಿರಾಜ್, ಜಿಲ್ಲಾ ಸಮಿತಿ ಸದಸ್ಯರಾದ ಕೊಟ್ಟ ಶಂಕರ್, ತಾಲೂಕು ಸಂಚಾಲಕರಾದ ಯಲ್ಲಾಪುರ ನರಸಯ್ಯ ಸೇರಿದಂತೆ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ನೂರಾರು ತಮಟೆ ವಾದಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಟೆ ನುಡಿಸುವ ಮೂಲಕ ಪ್ರತಿಭಟನೆಗೆ ಶಕ್ತಿ ತುಂಬಿದರು.







