ದಲಿತ ನಾಯಕರು ಪಟ್ಟಭದ್ರರ ಪರವಾಗಿದ್ದಾರೆ: ನಿವೃತ್ತ ನ್ಯಾ.ವಿ.ಗೋಪಾಲಗೌಡ

ಬೆಂಗಳೂರು, ಜು.30: ಶೋಷಿತರ ಪರವಾಗಿದ್ದೇವೆ ಎನ್ನುವ ದಲಿತ ರಾಜಕೀಯ ನಾಯಕರು ಪಟ್ಟಭದ್ರರ ಹಿತಾಸಕ್ತಿಗಳನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಭಾರತೀಯ ವಿದ್ಯಾ ಭವನದಲ್ಲಿ ಆಯೋಜಿಸಿದ್ದ ಚಿ.ನಾ.ರಾಮು ಬರೆದಿರುವ ‘ಬಲಿತ ದಲಿತರ ತುಳಿತ ನನ್ನ ಜನ ಅನಾಥ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೂರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿರುವ, ಶೋಷಿತರ ಪರ ಎಂದು ಹೇಳುವ ನಾಯಕರು ದಲಿತರ ಪರವಾಗಿ ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಸರಕಾರಿ ಕಚೇರಿಗಳಲ್ಲಿ ಹಾಕಿಕೊಳ್ಳುವ ಜನ ನಾಯಕರು, ಅಂಬೇಡ್ಕರ್ ಯಾರ ಪರವಾಗಿ ಹೋರಾಟ ಮಾಡಿದರೋ, ಯಾರನ್ನು ಪ್ರತಿನಿಧಿಸಿದ್ದರೋ ಅವರನ್ನು ಮರೆತು ರಾಜ್ಯಭಾರ ನಡೆಸುತ್ತಿದ್ದಾರೆ. ಮೀಸಲಾತಿಯ ಕೆನೆಪದರ ಹಿಂದುಳಿದವರಿಗೆ ಮಾತ್ರ ಸಿಗಬೇಕು ಎಂಬ ವಾದ ಬಹುಕಾಲದಿಂದಲೂ ಚಾಲ್ತಿಯಲ್ಲಿದೆ ಎಂದು ಹೇಳಿದರು.
ಸ್ವತಂತ್ರ ಭಾರತದ 71 ವರ್ಷಗಳಲ್ಲಿ, 68 ಗಣರಾಜ್ಯದ ಚರಿತ್ರೆಯಲ್ಲಿ ಅಂಬೇಡ್ಕರ್ ಪ್ರತಿಪಾದಿಸಿದ ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಯಾರಿಗೆ ಸಿಗಬೇಕಾಗಿತ್ತೋ, ಅವರಿಗೆ ಸಂಪೂರ್ಣವಾಗಿ ವಂಚನೆಯಾಗಿದೆ. ಅಧಿಕಾರ ನಡೆಸಿದವರು ಹಾಗೂ ನ್ಯಾಯಾಂಗ ಯಾಕೆ ಇದರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಹೀಗಾಗಿ, ನಾಡಿನ ಜನರು ಇದರ ಬಗ್ಗೆ ಚಿಂತನೆ ಮಾಡಬೇಕು. ಹೋರಾಟದ ಮೂಲಕ ಕಣ್ಣು ತೆರೆಸುವ ಪ್ರಯತ್ನವಾಗಬೇಕು ಎಂದು ಆಶಿಸಿದರು.
ಶೋಷಿತರಿಗೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ಆದರೆ, ಉಳ್ಳವರು ಅದನ್ನು ಪಡೆದುಕೊಳ್ಳುತ್ತಿದ್ದಾರೆ. ನನ್ನೂರಿನಲ್ಲಿ ಇದುವರೆಗೂ ಒಬ್ಬ ದಲಿತನಿಗೆ ಸರಕಾರಿ ನೌಕರಿ ಸಿಕ್ಕಿಲ್ಲ. ಅಂದರೆ, ನಾವಿಂದು ಯಾವ ಸ್ಥಿತಿಯಲ್ಲಿದ್ದೇವೆ ಎಂದ ಅವರು, ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಮೀಸಲಾತಿ ನೀಡಬಾರದು ಎಂದು ಹೋರಾಟ ಮಾಡಬೇಕು. ಆಗ ಮಾತ್ರ ದಲಿತರಿಗೆ ನ್ಯಾಯ ಸಿಗುತ್ತದೆ ಎಂದರು.
ಇಂದಿನ ಭಾರತದ ಸನ್ನಿವೇಶದಲ್ಲಿ ಕಾರ್ಪೋರೇಟ್‌ಗಳಿಗೆ, ಉದ್ಯಮಿಪತಿಗಳಿಗೆ, ಕೋಟ್ಯಾಧೀಶರಿಗೆ ನ್ಯಾಯ ಸಿಗುತ್ತಿದೆ. ಸಂಪತ್ತು, ಭೂಮಿ ಎಲ್ಲವೂ ಅವರಿಗೆ ಮೀಸಲಾಗಿದೆ. ಉಳ್ಳವರು ಉತ್ತಮ ಶಿಕ್ಷಣ ಪಡೆದರೆ, ಶೋಷಿತರು, ತುಳಿತಕ್ಕೊಳಗಾದವರು ಶಿಕ್ಷಣ ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲವನ್ನೂ ಉಳ್ಳವರೇ ಪಡೆದುಕೊಂಡರೆ, ಶೋಷಿತರು ಎಲ್ಲಿಗೆ ಹೋಗಬೇಕು. ಹೀಗಾಗಿ, ಸಾಮಾನ್ಯರಿಗೂ, ದಲಿತ, ಶೋಷಿತರಿಗೂ ಸಾಮಾಜಿಕ, ಆರ್ಥಿಕ, ಸಾಮಾಜಿಕ ನ್ಯಾಯ ಸಿಗಬೇಕಿದೆ ಎಂದು ಗೋಪಾಲಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಕೆ.ಶ್ರೀಧರ್‌ರಾವ್, ಮಾಜಿ ಕೇಂದ್ರ ಸಚಿವ ಡಾ.ಸಂಜಯ್ ಪಾಸ್ವಾನ್, ಲೇಖಕ ನೀರಕಲ್ಲು ಶಿವಕುಮಾರ್, ದಲಿತ ಮುಖಂಡ ಚಿ.ನಾ.ರಾಮು ಉಪಸ್ಥಿತರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿಯನ್ನು ಯಾವ ಕಾರಣಕ್ಕಾಗಿ ನೀಡಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮೀಸಲಾತಿ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ. ಸ್ವಾತಂತ್ರ ಬಂದು 71 ವರ್ಷಗಳು ಕಳೆದರೂ ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ.
-ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ







