ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೆ ಒತ್ತಾಯ: ದಲಿತ ಸಂಘಟನೆಗಳ ಒಕ್ಕೂಟ ಧರಣಿ

ಬೆಂಗಳೂರು, ಜು.30: ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಯನ್ನು ಕೂಡಲೆ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟವು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಪ್ರತಿಭಟನಾಕಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆಯಲ್ಲಿದ್ದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಸಂಘಟನೆಯ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸರಕಾರದ ಸಚಿವರೊಬ್ಬರನ್ನು ಸ್ಥಳಕ್ಕೆ ಕರೆಸಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು.
ದಲಿತ ಮುಖಂಡರ ಒತ್ತಾಯದ ಮೇರೆಗೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿಪತ್ರ ಪಡೆದು, ಆ.1(ಬುಧವಾರ)ರ ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೊಂದಿಗೆ ಮಾತುಕತೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಹಾಗೂ ಎಸ್ಸಿ, ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಗೆ ಜಾರಿಗೆ ನನ್ನ ಬೆಂಬಲವಿದೆ ಎಂದು ಭರವಸೆ ನೀಡಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷ ಡಾ.ವೆಂಕಟಸ್ವಾಮಿ ಮಾತನಾಡಿ, ರಾಷ್ಟ್ರಪತಿ ಅಂಕಿತ ಎಸ್ಸಿ-ಎಸ್ಟಿ ಭಡ್ತಿ ಮೀಸಲಾತಿ ಕಾಯ್ದೆಗೆ ರಾಜ್ಯ ಸರಕಾರದಲ್ಲಿ ಮಾನ್ಯತೆ ಇಲ್ಲವೆಂದಾದರೆ, ಸಾಮಾಜಿಕ ನ್ಯಾಯವನ್ನು ಹುಡುಕಿಕೊಂಡು ಎಲ್ಲಿಗೆ ಹೋಗಬೇಕು. ಎಸ್ಸಿ-ಎಸ್ಟಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 15 ದಿನಗಳಿಂದ ಬೀದಿಯಲ್ಲಿ ಕುಳಿತಿದ್ದರೂ ಸರಕಾರ ಈ ಬಗ್ಗೆ ಗಮನ ಕೊಡದೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ದಲಿತ ಸಮುದಾಯಕ್ಕೆ ಸಾವಿರಾರು ವರ್ಷಗಳಿಂದಲೂ ಅನ್ಯಾಯವಾಗುತ್ತಲೆ ಬಂದಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಇದು ಮುಂದುವರೆಯುತ್ತಿರುವುದು ಪ್ರಜಾಪ್ರಭುತ್ವದ ಅಣಕವೆಂದರೆ ತಪ್ಪಾಗಲಾರದು. ದಲಿತ ಸಮುದಾಯ ಶಾಂತಿಯುತವಾಗಿ ಪ್ರತಿಭಟನೆಗಳನ್ನು ಮಾಡಿಕೊಂಡು ಬರುತ್ತಿದೆ. ಆದರೂ ಸರಕಾರಕ್ಕೆ ದಲಿತರ ಬಗ್ಗೆ ಕನಿಕರವೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಮುದಾಯ ಇನ್ನೆಷ್ಟು ದಿನ, ವರ್ಷಗಳು ಮೂಲಭೂತ ಹಕ್ಕುಗಳಿಂದ ವಂಚಿತವಾಗಬೇಕೆಂದು ಸರಕಾರ ಬಯಸುತ್ತದೆ. ದಲಿತ ಜನಪ್ರತಿನಿಧಿಗಳು ನಮ್ಮ ಬೆಂಬಲಕ್ಕೆ ಬರದಿದ್ದರೆ ನಮ್ಮ ನೋವನ್ನು ಯಾರ ಬಳಿ ಕೇಳಬೇಕು. ಹೀಗಾಗಿ ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಲಯನ್ ಬಾಲಕೃಷ್ಣ, ರಾಮ್‌ಪುರ ನಾಗೇಶ್, ಜೆ.ಚಂದ್ರಪ್ಪ ಎಂ.ಎಂ.ರಾಜು, ಬನಶಂಕರಿ ನಾಗು ಹಾಗೂ ನಾರ್ಥ್‌ಈಸ್ಟ್ ಫೌಂಡೇಶನ್‌ನ ರಾಹುಲ್‌ರಾಯ್ ಸೇರಿದಂತೆ ನೂರಾರು ಮಂದಿ ಪ್ರತಿಭಟನಾಕಾರರು ಉಪಸ್ಥಿತರಿದ್ದರು.







