ಮಣಿಪುರ ನಕಲಿ ಎನ್‌ಕೌಂಟರ್ ಆರೋಪಿಗಳನ್ನು ಇದುವರೆಗೆ ಯಾಕೆ ಬಂಧಿಸಿಲ್ಲ?: ಸಿಬಿಐಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಹೊಸದಿಲ್ಲಿ, ಜು. 30: ಸೇನೆ, ಅಸ್ಸಾಂ ರೈಫಲ್ಸ್ ಹಾಗೂ ರಾಜ್ಯ ಪೊಲೀಸರಿಂದ ನಡೆದಿದೆ ಎಂದು ಆರೋಪಿಸಲಾದ ಮಣಿಪುರ ನಕಲಿ ಎನ್‌ಕೌಂಟರ್‌ನ ಎರಡು ಆರೋಪ ಪಟ್ಟಿ ಸಲ್ಲಿಸಲಾಗಿದೆ ಹಾಗೂ ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಐದಕ್ಕಿಂತ ಹೆಚ್ಚು ಅಂತಿಮ ವರದಿಯನ್ನು ಆಗಸ್ಟ್‌ನಲ್ಲಿ ಸಲ್ಲಿಸಲಾಗುವುದು ಎಂದು ಸಿಬಿಐ ನಿರ್ದೇಶಕರು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.
ಮಣಿಪುರದಲ್ಲಿ ನಡೆದ ಕಾನೂನು ಬಾಹಿರ ಕೊಲೆ ಹಾಗೂ ನಕಲಿ ಎನ್‌ಕೌಂಟರ್ ಆರೋಪದ ಪ್ರಕರಣದ ತನಿಖೆಯಲ್ಲಿ ಸಿಬಿಐ ಅನುಚಿತವಾಗಿ ದೀರ್ಘ ಕಾಲ ತೆಗೆದುಕೊಂಡಿರುವುದಕ್ಕೆ ಅಸಮಾಧಾನಗೊಂಡಿರುವ ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಮಣಿಪುರ ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿ ಹತ್ಯೆ, ಕ್ರಿಮಿನಲ್ ಪಿತೂರಿ ಹಾಗೂ ಸಾಕ್ಷಿಗಳ ನಾಶದ ಅಪರಾಧಕ್ಕೆ ಸಂಬಂಧಿಸಿ 14 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐಯ ನಿರ್ದೇಶಕರು ನ್ಯಾಯಮೂರ್ತಿ ಎಂ.ಬಿ. ಲೋಕುರ್ ಹಾಗೂ ಯು.ಯು. ಲಲಿತ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಆದಾಗ್ಯೂ, ಸಿಬಿಐ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, 4 ನಕಲಿ ಎನ್‌ಕೌಂಟರ್ ಬಗ್ಗೆ ಆರೋಪ ಪಟ್ಟಿ ದಾಖಲಿಸಿದ ಹೊರತಾಗಿಯೂ ಯಾಕೆ ಇದುವರೆಗೆ ಯಾಕೆ ಯಾರನ್ನೂ ಬಂಧಿಸಿಲ್ಲ ಎಂದು ಪ್ರಶ್ನಿಸಿತು. ಸಿಬಿಐ ಪ್ರಕಾರ, ಮಣಿಪುರದಲ್ಲಿ ಕನಿಷ್ಠ 4 ಮಂದಿ ಕೊಲೆಗಾರರು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಅನುಮತಿ ನೀಡಿದರೆ ಸಮಾಜಲ್ಲಿ ಏನಾಗಬಹುದು ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಮಣಿಪುರದ ಪ್ರತ್ಯೇಕ ಎನ್‌ಕೌಂಟರ್ ಪ್ರಕರಣಗಳ 5 ಅಂತಿಮ ವರದಿಯನ್ನು ಆಗಸ್ಟ್ 31ರಂದು ಸಲ್ಲಿಸಲಾಗುವುದು ಹಾಗೂ 20ಕ್ಕೂ ಅಧಿಕ ಎನ್‌ಕೌಂಟರ್‌ಗಳ ತನಿಖೆಯನ್ನು ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಎಂದು ಸಿಬಿಐ ನಿರ್ದೇಶಕರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.







