ಮರಾಠಾ ಮೀಸಲಾತಿ ಬೇಡಿಕೆ: ರೈಲಿನೆದುರು ಹಾರಿ ವ್ಯಕ್ತಿ ಆತ್ಮಹತ್ಯೆ
ಔರಂಗಾಬಾದ್ (ಮಹಾರಾಷ್ಟ್ರ), ಜು.30: ಮರಾಠಾ ಮೀಸಲಾತಿ ಬೇಡಿಕೆಗೆ ಸಂಬಂಧಿಸಿದಂತೆ ರವಿವಾರ ರಾತ್ರಿ ಇಲ್ಲಿ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿನೆದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಪ್ರಮೋದ್ ಜೈಸಿಂಗ್ ಹೋರೆ(35) ಮೀಸಲಾತಿ ಬೇಡಿಕೆಯನ್ನು ಬೆಂಬಲಿಸಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶವನ್ನು ರವಿವಾರ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.
ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ಹೋರೆಗೆ ಈ ಅತಿರೇಕದ ಕ್ರಮಕ್ಕೆ ಮುಂದಾಗದಂತೆ ಹಲವಾರು ಸ್ನೇಹಿತರು ಕೋರಿಕೊಂಡಿದ್ದರೂ ಆತ ಕಿವಿಗೊಟ್ಟಿರಲಿಲ್ಲ ಎಂದರು.
ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವ ವಿಷಯದಲ್ಲಿ ಸರಕಾರವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಹೋರೆಯ ಮೃತದೇಹವನ್ನು ತಾವು ಸ್ವೀಕರಿಸುವುದಿಲ್ಲ ಎಂದು ಆತನ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಹೋರೆ ಮುಕುಂದವಾಡಿಯಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಮತ್ತು ಆತನ ಪತ್ನಿ ಗ್ರಾಮಸೇವಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದು ಪೊಲೀಸರು ಹೇಳಿದರು.





