ಮಡಿಕೇರಿ: ಜೀವವಿಮಾ ಉದ್ಯೋಗಿ ಮನೆ ಮೇಲೆ ಗುಂಡಿನ ದಾಳಿ; ಮನೆ ಮಂದಿ ಪ್ರಾಣಾಪಾಯದಿಂದ ಪಾರು
ಕಿಟಕಿಯ ಗಾಜುಗಳು ಪುಡಿ ಪುಡಿ
![ಮಡಿಕೇರಿ: ಜೀವವಿಮಾ ಉದ್ಯೋಗಿ ಮನೆ ಮೇಲೆ ಗುಂಡಿನ ದಾಳಿ; ಮನೆ ಮಂದಿ ಪ್ರಾಣಾಪಾಯದಿಂದ ಪಾರು ಮಡಿಕೇರಿ: ಜೀವವಿಮಾ ಉದ್ಯೋಗಿ ಮನೆ ಮೇಲೆ ಗುಂಡಿನ ದಾಳಿ; ಮನೆ ಮಂದಿ ಪ್ರಾಣಾಪಾಯದಿಂದ ಪಾರು](https://www.varthabharati.in/sites/default/files/images/articles/2018/07/30/145620.jpg)
ಮಡಿಕೇರಿ, ಜು.30: ಮನೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಫೀ.ಮಾ.ಕಾರ್ಯಪ್ಪ ಕಾಲೇಜಿನ ಹಿಂಭಾಗದಲ್ಲಿ ಸೋಮವಾರ ನಡೆದಿದೆ.
ಮಡಿಕೇರಿಯ ಜೀವವಿಮಾ ನಿಗಮದಲ್ಲಿ ಉದ್ಯೋಗಿಯಾಗಿರುವ ಜನಾರ್ಧನ ಎಂಬವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜು.30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಸಮೀಪ ಗುಂಡಿನ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯೊಳಗೆ ಮಲಗಿದ್ದ ಜನಾರ್ಧನ ಹೊರ ಬಂದು ನೋಡಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಮತ್ತೊಂದು ಗುಂಡನ್ನು ಮನೆಗೆ ಹಾರಿಸಿದ್ದು, ಕಿಟಕಿಯ ಗಾಜುಗಳು ಪುಡಿಯಾಗಿದೆ. ಕಿಟಕಿಯ ಪ್ರೇಮ್‌ಗಳಿಗೆ ಗುಂಡಿನ ಚೂರುಗಳು ಹೊಕ್ಕಿದ್ದು, ಜನಾರ್ಧನ ಸೇರಿದಂತೆ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನೆಗೆ ಗುಂಡು ಹಾರಿಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಜನಾರ್ಧನ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಡಿಕೇರಿ ಡಿವೈಎಸ್ಪಿ ಸುಂದರ್ ರಾಜ್, ವೃತ್ತ ನಿರೀಕ್ಷಕ ಮೇದಪ್ಪ, ಠಾಣಾಧಿಕಾರಿ ಶಣ್ಮುಗ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.