ರಾಜ್ಯ ಹಣಕಾಸು ಸಂಸ್ಥೆಗೆ 25.55 ಕೋಟಿ ರೂ.ಗಳ ನಿವ್ವಳ ಲಾಭ
ಬೆಂಗಳೂರು, ಜು.31: ಕಳೆದ ವರ್ಷದಲ್ಲಿ ಜಾರಿಗೊಂಡ ಸರಕು ಸೇವಾ ತೆರಿಗೆ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಮಾರ್ಚ್ 2018ರ ಅಂತ್ಯದವರೆಗೆ ಒಟ್ಟು 25.55 ಕೋಟಿ ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿದೆ.
ಸಂಸ್ಥೆಯು ಮಂಜೂರಾತಿಯಲ್ಲಿ ಅಲ್ಪಪ್ರಮಾಣದ ಸುಧಾರಣೆಯನ್ನು ಸಾಧಿಸಿದ್ದರೂ ಕೂಡ ಕರ್ನಾಟಕ ಸರಕಾರದ ನೆರವಿನಿಂದಾಗಿ, 842.13 ಕೋಟಿ ರೂ.ಗಳ ಮಂಜೂರಾತಿ, 561.21ಕೋಟಿ ರೂ.ಗಳ ವಿತರಣೆ ಹಾಗೂ 781.91 ಕೋಟಿ ರೂ.ಗಳ ವಸೂಲಾತಿಯನ್ನು ಮಾಡಿದೆ. ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ 200.84 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ 269.20 ಕೋಟಿ ರೂ.ಗಳು ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ 77.95 ಕೋಟಿ ರೂ.ಗಳ ಹಣಕಾಸಿನ ನೆರವನ್ನು ನೀಡಿದೆ.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಕಳೆದ 59 ವರ್ಷಗಳಲ್ಲಿ ಸಣ್ಣ ಪ್ರಮಾಣದ ಉದ್ದಿಮೆಗಳ ಅಭಿವೃದ್ಧಿಗಾಗಿ, ರಾಜ್ಯದ ಹಿಂದುಳಿದ ಪ್ರದೇಶಗಳ ಕೈಗಾರಿಕಾ ಅಭಿವೃದ್ಧಿಗಾಗಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರು ಉದ್ದಿಮೆಗಳನ್ನು ಸ್ಥಾಪಿಸಲು ಹಣಕಾಸು ನೆರವು ನೀಡಿದೆ. ಇಲ್ಲಿಯವರೆಗೂ ಸಂಸ್ಥೆಯು 1,72,000 ಕ್ಕಿಂತಲೂ ಹೆಚ್ಚಿನ ಘಟಕಗಳಿಗೆ 16,000 ಕೋಟಿ ರೂ.ಗಳನ್ನು ಮೀರಿದ ಸಂಚಿತ ಮಂಜೂರಾತಿಯನ್ನು ಮಾಡಿದೆ. ಇದರಲ್ಲಿ ಶೇ.50ರಷ್ಟು ಹಣಕಾಸಿನ ನೆರವನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.







