ಮೈಸೂರು: ಬಸ್ಸಿನಲ್ಲಿ ಮಹಿಳೆಯ 1.80 ಲಕ್ಷ ರೂ. ನಗದು ಕಳವು
ಮೈಸೂರು,ಜು.31: ಬಸ್ ನಲ್ಲಿ ಸೀಟು ಸಿಗದ ಕಾರಣ ಬ್ಯಾಗ್ ಹಿಡಿದುಕೊಳ್ಳಲು ಪರದಾಡುತ್ತಿದ್ದ ಮಹಿಳೆಯೋರ್ವರ ಕೈಯಲ್ಲಿದ್ದ ಬ್ಯಾಗ್ ನ್ನು ನಾವು ಇಟ್ಟುಕೊಳ್ಳುತ್ತೇವೆ ಕೊಡಿ ಎಂದು ಪಡೆದ ಮಹಿಳೆಯರಿಬ್ಬರು ಅದರಲ್ಲಿದ್ದ ಹಣ ಎಗರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಜು.26 ರಂದು ಮಧ್ಯಾಹ್ನ 2.30 ರ ಸುಮಾರಿಗೆ ತಿ.ನರಸೀಪುರ ನಿವಾಸಿ ದಿವ್ಯಾ(57) ಎಂಬವರು ಮಹದೇಶ್ವರ ಬಡಾವಣೆಯಲ್ಲಿ ಸಿಟಿ ಬಸನ್ನು ಹತ್ತಿದ್ದು, ಬಸ್ಸು ರಶ್ ಆಗಿದ್ದರಿಂದ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ಬಳಿ ಬ್ಯಾಗನ್ನು ಕೊಟ್ಟಿದ್ದಾರೆ. ಬ್ಯಾಗಿನಲ್ಲಿ 1,80,000 ರೂ.ನಗದು ಇತ್ತು ಎನ್ನಲಾಗಿದ್ದು, ಬಸ್ ಸಯ್ಯಾಜಿರಾವ್ ರಸ್ತೆಗೆ ಬಂದಾಗ ಬ್ಯಾಗ್ ಹಿಡಿದುಕೊಂಡ ಮಹಿಳಾ ಪ್ರಯಾಣಿಕರು ಬಸ್ಸಿನಿಂದ ಇಳಿದು ಬ್ಯಾಗನ್ನು ದಿವ್ಯಾರ ಬಳಿ ಕೊಟ್ಟಿದ್ದಾರೆ. ಬಳಿಕ ಬ್ಯಾಗ್ ಚೆಕ್ ಮಾಡಿದಾಗ ಅದರಲ್ಲಿ ಹಣವಿಲ್ಲದಿರುವುದು ತಿಳಿದು ಬಂದಿದೆ.
ಹಣವಿಲ್ಲ ಎಂದು ಕೂಗಿಕೊಳ್ಳುವಷ್ಟರಲ್ಲಿ ಮಹಿಳೆಯರು ಇಳಿದು ಹೋಗಿದ್ದು, ಈ ಕುರಿತು ದಿವ್ಯಾ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





