ಕಾಲೇಜು ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆ

ಮಂಡ್ಯ, ಜು.31: ವಿದ್ಯಾರ್ಥಿಯೊಬ್ಬ ಕಾಲೇಜಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿದ ವಿದ್ಯಾರ್ಥಿ ಮದ್ದೂರು ತಾಲೂಕಿನ ಕೂಳಗೆರೆಯ ಸ್ವಾಮಿ ಎಂಬುವವರ ಪುತ್ರ ನಿರಂಜನ್(17) ಎಂದು ತಿಳಿದು ಬಂದಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ ಕಾಲೇಜಿನ ವಸತಿ ನಿಲಯದಲ್ಲಿದ್ದ ಎಂದು ತಿಳಿದು ಬಂದಿದೆ.
ಸೋಮವಾರ ಸಂಜೆ 7ರವರಗೆ ಸಹಪಾಠಿಗಳ ಜೊತೆಗಿದ್ದ ನಿರಂಜನ್ ನಂತರ ನಾಪತ್ತೆಯಾಗಿದ್ದು, ನಂತರ ರಾತ್ರಿ 9ರ ಸುಮಾರಿಗೆ ಕಾಲೇಜಿನ ಹಿಂದಿ ಬೋಧನಾ ಕೊಠಡಿಯಲ್ಲಿ ಕರ್ಟನ್‍ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಆತ ಕಳೆದ 26 ರಂದು ನಡೆದ ಗಣಿತ ಪರೀಕ್ಷೆಯಲ್ಲಿ 50 ಅಂಕಕ್ಕೆ 5 ಅಂಕ ಪಡೆದಿದ್ದರಿಂದ ಮತ್ತು ತನ್ನ ಪ್ರೀತಿಯ ತಾತಾ ಇತ್ತೀಚೆಗೆ ಮರಣ ಹೊಂದಿದ್ದ ಹಿನ್ನಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ತನ್ನ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಂದೆ ಸ್ವಾಮಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







