ಅಸ್ಸಾಂನ ಎನ್‌ಆರ್‌ಸಿಯಿಂದ ನಾಗರಿಕ ಯುದ್ಧ, ರಕ್ತಪಾತ: ಮಮತಾ ಬ್ಯಾನರ್ಜಿ ಎಚ್ಚರಿಕೆ

ಹೊಸದಿಲ್ಲಿ, ಜು. 31: ಜನರನ್ನು ವಿಭಜಿಸುವ 'ರಾಜಕೀಯ ಉದ್ದೇಶ'ದಿಂದ ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಮಂಗಳವಾರ ಆರೋಪಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ದೇಶದಲ್ಲಿ ರಕ್ತಪಾತ ಹಾಗೂ ನಾಗರಿಕ ಯುದ್ಧಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ''ಎನ್‌ಆರ್‌ಸಿಯನ್ನು ರಾಜಕೀಯ ಉದ್ದೇಶದಿಂದ ಮಾಡಲಾಗಿದೆ. ಇದು ಕಾರ್ಯರೂಪಕ್ಕೆ ಬರುವುದಕ್ಕೆ ನಾವು ಬಿಡುವುದಿಲ್ಲ. ಅವರು (ಬಿಜೆಪಿ) ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪರಿಸ್ಥಿತಿ ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿ ನಾಗರಿಕ ಯುದ್ಧ, ರಕ್ತಪಾತ ನಡೆಯಲಿದೆ'' ಎಂದು ಅವರು ಹೇಳಿದರು. ''ಚುನಾವಣೆಯಲ್ಲಿ ಜಯ ಗಳಿಸುವ ಏಕೈಕ ಉದ್ದೇಶದಿಂದ ಜನರನ್ನು ಬಲಿಪಶು ಮಾಡಬೇಡಿ. ಪಟ್ಟಿಯಲ್ಲಿ ಹೆಸರಿಲ್ಲದ ನಾಗರಿಕರು ತಮ್ಮ ಗುರುತು ಕಳೆದುಕೊಳ್ಳುತ್ತಾರೆ ಎಂದು ನೀವು ಭಾವಿಸಬೇಡಿ'' ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಸರ್ಬನಾದ ಸೋನೋವಾಲ್ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಸರಕಾರಕ್ಕೆ ಇತ್ತೀಚೆಗೆ ಮತ ನೀಡಿದ ಜನರನ್ನು ಅವರ ದೇಶದಲ್ಲೇ ನಿರಾಶ್ರಿತರು ಎಂದು ಘೋಷಿಸಲಾಗಿದೆ ಎಂದರು. ''ನನ್ನ ಮಾತೃ ಭೂಮಿ ವಿಭಾಗವಾಗುವುದನ್ನು ನಾನು ಬಯಸುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಇದು ಸಂಭವಿಸಲು ನಾನು ಅವಕಾಶ ನೀಡುವುದಿಲ್ಲ.'' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.





