ಬೆಂಗಳೂರು: ಗೃಹ ರಕ್ಷಕನ ಮೇಲೆ ಹಲ್ಲೆ ನಡೆಸಿ 13 ಬಾಲ ಅಪರಾಧಿಗಳು ಪರಾರಿ

ಬೆಂಗಳೂರು, ಜು.31: ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿ 13 ಜನ ಬಾಲ ಅಪರಾಧ ಕೇಂದ್ರದಿಂದ ಪರಾರಿಯಾಗಿರುವ ಘಟನೆ ಮಂಗಳವಾರ ಮುಂಜಾನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜು.23ರಂದು ನಗರದ ಮಡಿವಾಳದ ಬಾಲ ಅಪರಾಧ ಮಂದಿರದಿಂದ 9 ಬಾಲಕರು ಪರಾರಿಯಾಗಿದ್ದರು. ಬಳಿಕ ಅವರನ್ನು ಪೊಲೀಸರು ಹಿಡಿದಿದ್ದರು. ಆದರೆ, ಮಂಗಳವಾರ ನಸುಕಿನಲ್ಲಿ ಗೃಹರಕ್ಷಕನ ಮೇಲೆ ಹಲ್ಲೆ ನಡೆಸಿ ಇನ್ನೂ ನಾಲ್ವರು ಬಾಲಕರ ಪರಾರಿಯಾಗಿದ್ದಾರೆ. ಪರಾರಿಯಾಗಿರುವ ಬಾಲಕರ ಪೈಕಿ ಒಬ್ಬ ಮಾತ್ರ ಕೊಲೆಯೊಂದರ ಪ್ರಕರಣದ ಆರೋಪಿಯಾಗಿದ್ದು, ಈತನಿಗೆ 17 ವರ್ಷವಾಗಿದೆ. ಇನ್ನು ಉಳಿದ ಬಾಲಕರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ಮುಂಜಾನೆ ಬಾಲಕರು ಕೊಠಡಿಯಲ್ಲಿ ಜಗಳ ನಡೆದಂತೆ ನಟಿಸಿದ್ದಾರೆ. ಇದನ್ನು ನೋಡಿದ ರಾತ್ರಿಪಾಳಿ ಭದ್ರತೆಗಿದ್ದ ಗೃಹರಕ್ಷಕ ಕೂಡಲೇ ಅಲ್ಲಿಗೆ ತೆರಳಿದ್ದಾರೆ. ಬಳಿಕ ಎಲ್ಲರೂ ಒಟ್ಟಾಗಿ ಅವರ ಮೇಲೆ ಹಲ್ಲೆ ನಡೆಸಿದ ಬಾಲಕರು ಹೊರಗಿನಿಂದ ಚಿಲಕ ಹಾಕಿಕೊಂಡು ಓಡಿಹೋಗಿದ್ದಾರೆ.
ಬಾಲಮಂದಿರದಲ್ಲಿ 74 ಮಕ್ಕಳಿದ್ದು, ಇಬ್ಬರು ಸಿಬ್ಬಂದಿಯಿಂದ ಅವರ ನಿಯಂತ್ರಣ ಸಾಧ್ಯವಿಲ್ಲ. ಅಲ್ಲಿರುವ ಅವ್ಯವಸ್ಥೆ, ಪೋಷಕರ ಭೇಟಿಗೆ ಅವಕಾಶ ನೀಡದಿರುವುದು, ಬಹಳ ದಿನಗಳವರೆಗೆ ಜಾಮೀನು ಸಿಗದೆ ಇರುವುದು ಬಾಲಕರನ್ನು ಕೆರಳಿಸುತ್ತದೆ. ಹೀಗಾಗಿ, ಅವರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಡಿವಾಳ ಪೊಲೀಸರು ಹಾಗೂ ಬಾಲಮಂದಿರದ ಅಧಿಕಾರಿಗಳು ವಿಶೇಷ ತಂಡಗಳನ್ನು ರಚಿಸಿಕೊಂಡು ಅವರ ಹುಡುಕಾಟ ಪ್ರಾರಂಭಿಸಿದ್ದಾರೆ.







