ಹನೂರು: ವಿವಿಧ ಕಾಮಗಾರಿಗಳಿಗೆ ಶಾಸಕ ಆರ್.ನರೇಂದ್ರ ಶಿಲಾನ್ಯಾಸ

ಹನೂರು,ಜು.31: ಗುತ್ತಿಗೆದಾರರು ಕಾಮಗಾರಿ ನಿಗದಿತ ಸಮಯದೊಳಗೆ ಮುಗಿಸುವುದರ ಜೊತೆಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವತ್ತ ಗಮನಹರಿಸಬೇಕು ಎಂದು ಶಾಸಕ ಆರ್.ನರೇಂದ್ರ ರಾಜುಗೌಡ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಮಂಗಲ ಮತ್ತು ಬಂಡಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಧಿ(ಆರ್‍ಐಡಿಎಫ್)ಯಿಂದ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣ ಮತ್ತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಯೋಜನೆಯಿಂದ ಬಂಡಳ್ಳಿ ಮತ್ತು ಗಾಣಗಮಂಗಲ ಗ್ರಾಮದ ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ತಲಾ 20 ಲಕ್ಷದಂತೆ ಸಿಸಿರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಈ ಕಾಮಗಾರಿಗಳು ನಿಗದಿತ ಸಮಯದೊಳಗೆ ಪೂರ್ಣಗೂಳಿಸಬೇಕು ಮತ್ತು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭ ಜಿಪಂ ಸದಸ್ಯೆ ಲೇಖಾ ರವಿಕುಮಾರ್ ತಾಪಂ ಅಧ್ಯಕ್ಷ ರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮದ್, ಗ್ರಾಪಂ ಅಧ್ಯಕ್ಷ ರಾಚ್ಚಪ್ಪ, ಸದಸ್ಯ ಶಾಹುಲ್ ಅಹಮದ್, ಯೂತ್ ಕಾಂಗ್ರೇಸ್ ಅಧ್ಯಕ್ಷ ರಾಯಿಲ್, ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹರೀಶ್ ಕುಮಾರ್, ಸಹಾಯಕ ಇಂಜಿನಿಯರ್ ನರಸಿಂಹಮೂರ್ತಿ, ಟಿ.ಟಿ ಮೂರ್ತಿ ಪಿ.ಡಿ.ಒ ನವೀತಾ ತೇಜೆಗೌಡ ಇನ್ನಿತರರು ಹಾಜರಿದ್ದರು.





