ಸಮನ್ವಯ ಶಿಕ್ಷಣ ವ್ಯವಸ್ಥೆ ಜಾರಿಗೆ ರಾಜ್ಯ ವಿಶೇಷಚೇತನರ ಸಂಘಟನೆಗಳ ಒಕ್ಕೂಟ ಆಗ್ರಹ
ಬೆಂಗಳೂರು, ಜು.31: ವಿಕಲಚೇತನ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಸರಕಾರಗಳು ಎಲ್ಲ ಶಾಲಾ-ಕಾಲೇಜುಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಸಮನ್ವಯ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ರಾಜ್ಯ ವಿಶೇಷಚೇತನರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಅಂಗವಿಕಲ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಲ್ಲರಂತೆ ಅವರಿಗೂ ಸಮಾನವಾಗಿ ಶಿಕ್ಷಣ ಸಿಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನ ಶಿಕ್ಷಣ ವ್ಯವಸ್ಥೆಯನ್ನು ಜಾರಿ ಮಾಡಬೇಕು ಎಂದು ಹೇಳಿದರು.
ಅಂಗವಿಕಲ ಮಕ್ಕಳ ಹಾಗೂ ಸಮುದಾಯದ ಮಕ್ಕಳ ಸಮನ್ವಯ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರವು ಉಭಯ ಸದನಗಳಲ್ಲಿ ಚರ್ಚೆಯಾಗಬೇಕು. ಅದಕ್ಕಾಗಿ ಸದನಗಳಲ್ಲಿ ಪ್ರತ್ಯೇಕ ಸಮಯವನ್ನು ನಿಗದಿ ಮಾಡಬೇಕು. ಸರಕಾರ ಈಗಾಗಲೇ 28 ಸಾವಿರ ಸರಕಾರಿ ಶಾಲೆಗಳನ್ನು ವಿಲೀನ ಮಾಡಲು ಮುಂದಾಗಿದೆ. ಆದರೆ, ಸರಕಾರದ ಈ ಪ್ರಸ್ತಾಪ ಶೈಕ್ಷಣಿಕವಾಗಿ ಹಿಂದುಳಿದಿರುವ ಅಂಗವಿಕಲ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಸರಕಾರ ಪ್ರಸ್ತಾಪ ಹಿಂಪಡೆಯಬೇಕು ಹಾಗೂ ಶಿಕ್ಷಣದ ಹಕ್ಕನ್ನು ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಗವಿಕಲ ಮಕ್ಕಳ ಪ್ರಾಥಮಿಕ ಶಿಕ್ಷಣ ಗಟ್ಟಿತನವಿಲ್ಲದ ಕಾರಣ ಅಂಗವಿಕಲರಿಗಾಗಿ ಮೀಸಲಿಟ್ಟಿದ್ದ 110 ವೈದ್ಯಕೀಯ ಸೀಟುಗಳಲ್ಲಿ 25, 26 ದಂತ ವೈದ್ಯಕೀಯ ಶೂನ್ಯ, ಬಿ ಫಾರಂನಲ್ಲಿ 7 ಸೀಟುಗಳಲ್ಲಿ ಶೂನ್ಯ ಆರ್ಕಿಟೆಕ್‌ನಲ್ಲೂ ಅಂಗವಿಕಲ ವಿದ್ಯಾರ್ಥಿಗಳು ಸೀಟುಗಳನ್ನು ಪಡೆದುಕೊಂಡಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮಟ್ಟದಲ್ಲಿ ಅಂಗವಿಕಲ ಮಕ್ಕಳ ಶಿಕ್ಷಣ ಅಭಿವೃದ್ಧಿಯಾಗಿಲ್ಲ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೀಘ್ರ ಮಧ್ಯಸ್ಥಿಕೆ ಕೇಂದ್ರ ಮತ್ತು ಶಾಲಾ ಪೂರ್ವ ಶಿಕ್ಷಣವನ್ನು ವಿಶೇಷ ಆದ್ಯತೆ ಮೇಲೆ ಆರಂಭಿಸಬೇಕು. 2016 ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿ ಮಾಡಬೇಕು. ಶಿಕ್ಷಣ ಇಲಾಖೆ ವಿಕಲತೆಯ ಆಧಾರದ ಮೇಲೆ ಪಠ್ಯಕ್ರಮ, ಬೋಧನೆ ಮತ್ತು ಕಲಿಕಾ ಸಾಧನಗಳ ಮಾದರಿ ಹಾಗೂ ಪರ್ಯಾಯ ವಿಧಾನಗಳನ್ನು ರೂಪಿಸಬೇಕು ಎಂದು ಹೇಳಿದರು.
ಉನ್ನತ ಶಿಕ್ಷಣದಲ್ಲಿ ಅಂಗವಿಕಲರಿಗೆ ಶೇ.5 ರಷ್ಟು ಮೀಸಲಾತಿ ಜೊತೆಗೆ ಪದವಿ ಪೂರ್ವ ಹಂತದಲ್ಲಿ ಸಮನ್ವಯ ಶಿಕ್ಷಣ ಜಾರಿಗೆ ತರಬೇಕು. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಶೇ.5 ರಷ್ಟು ವಿಶೇಷಚೇತನರಿಗೆ ಮೀಸಲಿಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.







