ಆ.1ರೊಳಗೆ ಗೆಜೆಟ್ ಅಧಿಸೂಚನೆ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರಕಾರ
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೀಸಲು ಪಟ್ಟಿ ವಿಚಾರ
ಬೆಂಗಳೂರು, ಜು.31: ರಾಜ್ಯದ 215ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೀಸಲು ಪಟ್ಟಿ ಅಂತಿಮಗೊಳಿಸಲಾಗಿದ್ದು, ಬುಧವಾರದೊಳಗೆ(ಆ.1) ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ಮಾಹಿತಿ ನೀಡಿದೆ.
ನ್ಯಾಯಾಲಯದ ಮುಂದೆ ಎರಡು ಬಾರಿ ಭರವಸೆ ನೀಡಿದ ಹೊರತಾಗಿಯೂ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮೀಸಲು ಪಟ್ಟಿ ಪ್ರಕಟಿಸದ ಸರಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠದಲ್ಲಿ ಮಂಗಳವಾರ ನಡೆಯಿತು.
ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ಈಗಾಗಲೇ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ಪಟ್ಟಿ ಪ್ರಕಟಿಸಲಾಗಿದೆ. ಉಳಿದಿರುವ 16 ಸಂಸ್ಥೆಗಳಿಗೆ ಮೀಸಲು ಪಟ್ಟಿ ಅಂತಿಮಗೊಳಿಸಲಾಗಿದ್ದು, ಬುಧವಾರದೊಳಗೆ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದರಿಂದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಕೋರ್ಟ್ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ: ಸಂವಿಧಾನದ ವಿಧಿ 243 ಝಡ್ (ಜಿ) ಪ್ರಕಾರ ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಅವಕಾಶವಿಲ್ಲ ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.
ತುಮಕೂರು, ಮೈಸೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳ ಚುನಾವಣೆಗಾಗಿ ರಾಜ್ಯ ಸರಕಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ನಿಗದಿ ಪ್ರಶ್ನಿಸಿ ತುಮಕೂರಿನ ಕೆ.ಸಂದೀಪ್, ಮೈಸೂರಿನ ಎಂ.ಅನ್ವರ್ ಹಾಗೂ ಇತರರು ಸಲ್ಲಿಸಿರುವ ಪ್ರತ್ಯೇಕ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠದಲ್ಲಿ ಮಂಗಳವಾರವೂ ಮುಂದುವರಿಯಿತು.
ಈ ವೇಳೆ ವಾದ ಮಂಡಿಸಿದ ಎಜಿ ಉದಯ್ ಹೊಳ್ಳ, ವಾರ್ಡ್ ಮರುವಿಂಗಡಣೆ, ಮೀಸಲು ನಿಗದಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಕೋರ್ಟ್ ಮಧ್ಯಪ್ರವೇಶದಿಂದ ಚುನಾವಣೆಗಳು ವಿಳಂಬವಾಗುವ ಸಾಧ್ಯತೆಯಿದೆ. ಮೇಲಾಗಿ, ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ನಿಗದಿಯಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ಹೀಗಾಗಿ ಅರ್ಜಿಗಳನ್ನು ವಜಾಗೊಳಿಸಬೇಕೆಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.







