ಶಿವಮೊಗ್ಗ: ಕನ್ನಡದಲ್ಲಿ ಬೈಲಾ ವಿವರ ನೀಡಲು, ವಿಶೇಷ ಸಭೆ ಮುಂದೂಡಲು ಆಗ್ರಹಿಸಿ ಮೇಯರ್, ಆಯುಕ್ತರಿಗೆ ಮನವಿ

ಶಿವಮೊಗ್ಗ, ಜು. 31: ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗಿರುವ ಕಟ್ಟಡ ಬೈಲಾ-2017 ಕರಡು ಮಾದರಿಯ ವಿವರವನ್ನು ಕನ್ನಡ ಭಾಷೆಯಲ್ಲಿ ನೀಡಬೇಕು. ಈ ಕುರಿತಂತೆ ಕರೆಯಲಾಗಿರುವ ಕಾರ್ಪೊರೇಷನ್‌ನ ವಿಶೇಷ ಸಭೆಯನ್ನು ಮುಂದೂಡಬೇಕೆಂದು ಆಗ್ರಹಿಸಿ, ಕಾರ್ಪೊರೇಟರ್‌ಗಳ ನಿಯೋಗದಿಂದ ಮಂಗಳವಾರ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮೇಯರ್ ನಾಗರಾಜ್ ಕಂಕಾರಿ ಹಾಗೂ ಆಯುಕ್ತ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 9 ತಿಂಗಳ ಹಿಂದೆಯೇ ಕಟ್ಟಡ ಬೈಲಾ - 2017 ಸಿದ್ಧಪಡಿಸಿ, ರಾಜ್ಯಪತ್ರದಲ್ಲಿಯೂ ಪ್ರಕಟಿಸಲಾಗಿದೆ. ಆದರೆ ಈ ಕುರಿತಂತೆ ಪಾಲಿಕೆ ಸದಸ್ಯರ ಗಮನಕ್ಕೆ ತರುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ. ಇದೀಗ ಕಟ್ಟಡ ಬೈಲಾದ ನಿಯಮದ ಅನುಷ್ಠಾನಕ್ಕೆ ಮುಂದಾಗಿದ್ದು, ಈ ಕುರಿತಂತೆ ಪಾಲಿಕೆಯ ವಿಶೇಷ ಸಭೆಯನ್ನು ಆಗಸ್ಟ್ 4ರಂದು ಕರೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್‌ಗಳಿಗೆ ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿರುವ ಕಟ್ಟಡ ಬೈಲಾದ ವಿವರಗಳನ್ನು ಜು. 30ರಂದು ನೀಡಲಾಗಿದೆ. ಇದು 128 ಪುಟಗಳಿವೆ. ಆ. 4ರಂದು ವಿಶೇಷ ಸಭೆ ಕರೆಯಲಾಗಿದ್ದು, ಕೇವಲ ಮೂರ್ನಾಲ್ಕು ದಿನಗಳಲ್ಲಿ ಬೈಲಾ ವಿವರ ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಕಾರಣದಿಂದ ಆ. 4ರಂದು ಆಹ್ವಾನಿಸಲಾಗಿರುವ ವಿಶೇಷ ಸಭೆಯನ್ನು ಮುಂದೂಡಬೇಕು. ಆಂಗ್ಲ ಭಾಷೆಯಲ್ಲಿ ನೀಡಲಾಗಿರುವ ಕಟ್ಟಡ ಬೈಲಾದ ವಿವರವನ್ನು ಕನ್ನಡ ಭಾಷೆಗೆ ತರ್ಜುಮೆಗೊಳಿಸಿ, ಸದಸ್ಯರಿಗೆ ನೀಡಬೇಕು. ಹಾಗೆಯೇ ಪ್ರಸ್ತುತ ನೀಡಲಾಗಿರುವ ವಿವರದಲ್ಲಿ ಕೆಲ ಪುಟಗಳಲ್ಲಿ ಮಾಹಿತಿಯೇ ಇಲ್ಲವಾಗಿದ್ದು, ಸಮಗ್ರ ವಿವರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭ ಪಾಲಿಕೆಯ ವಿರೋಧ ಪಕ್ಷದ ನಾಯಕ ಡಿ. ಮೋಹನ್ ರೆಡ್ಡಿ, ಸದಸ್ಯರಾದ ಸಿ.ಎಚ್.ಮಾಲತೇಶ್, ವೆಂಕ್ಯನಾಯ್ಕಿ, ಸುನೀತಾ ಅಣ್ಣಪ್ಪ, ಸುರೇಖಾ ಮುರುಳೀಧರ್ ಹಾಗೂ ಮತ್ತಿತರರು ಇದ್ದರು.







