ಆ.2 ರಂದು ಪ್ರತ್ಯೇಕತೆ ಕೂಗು ವಿರೋಧಿಸಿ ಧರಣಿ: ಕರವೇ ಮುಖಂಡ ತೇಗೂರು ಜಗದೀಶ್
ಚಿಕ್ಕಮಗಳೂರು, ಜು.31: ಕರ್ನಾಟಕದ ಏಕೀಕರಣ ಮಹಾನ್ ವ್ಯಕ್ತಿಗಳ ತ್ಯಾಗ, ಬಲಿದಾನದ ಸಂಕೇತವಾಗಿದ್ದು, ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಇಬ್ಬಾಗ ಮಾಡಲು ಬಿಡುವುದಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗನ್ನು ವಿರೋಧಿಸಿ ಆಗಸ್ಟ್ 2ರಂದು ಸಮಗ್ರ ಕರ್ನಾಟಕ ಅಭಿವೃದ್ಧಿಯೇ ನಮ್ಮ ಗುರಿ ಹಾಗೂ ಪ್ರತ್ಯೇಕತೆಗೆ ನಮ್ಮ ಬೆಂಬಲವಿಲ್ಲ ಎಂಬ ನಿಲುವಿನೊಂದಿಗೆ ಸಾಂಕೇತಿಕ ಧರಣಿಯನ್ನು ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಶಾಸಕ ಶ್ರೀರಾಮುಲು ಉ.ಕ. ಪ್ರತ್ಯೇಕ ರಾಜ್ಯಕ್ಕೆ ತಾವು ಮುಂಚೂಣಿಯಲ್ಲಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಪ್ರಸಕ್ತ ಅವರು ಬಣ್ಣ ಬದಲಾಯಿಸಿ ಬೆಂಬಲವಿಲ್ಲ ಎನ್ನುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಎಚ್ಡಿಕೆ ಅವರು ಕೊಪ್ಪಳದ ರೈತ ಹೋರಾಟ ಕುರಿತಂತೆ ಆಡಿದ ಮಾತುಗಳು ಕನ್ನಡಿಗರ ನಡುವೆ ಬಿರುಕು ಮೂಡಿಸುವ ಹೇಳಿಕೆಯಾಗಿವೆ. ಅವರ ಹೇಳಿಕೆಯನ್ನು ರಕ್ಷಣಾ ವೇದಿಕೆ ಖಂಡಿಸುತ್ತದೆ. ಮುಖ್ಯಮಂತ್ರಿಗಳು ನಾಡಿನ ಜನತೆಯ ಕ್ಷಮೆ ಕೆಳಬೇಕೆಂದು ಆಗ್ರಹಿಸಿದರು.
ಸುದ್ದಿಗೊಷ್ಠಿಯಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿ ಪಂಚಾಕ್ಷರಿ, ತಾಲೂಕು ಅಧ್ಯಕ್ಷ ಮನೋಜ್ ಶೆಟ್ಟಿ, ತಾಲೂಕು ಉಪಾಧ್ಯಕ್ಷ ಕುಮಾರ್‌ಶೆಟ್ಟಿ ಉಪಸ್ಥಿತರಿದ್ದರು.







