ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಹೊಟ್ಟೆ ಭಾಗದ ಕರುಳು ಪತ್ತೆ; ಗೊಂದಲದಲ್ಲಿ ಸಾರ್ವಜನಿಕರು
ಚಿಕ್ಕಮಗಳೂರು, ಜು.31: ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹೆಬ್ಬಾಳೆ ಸೇತುವೆ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನ ಹೊಟ್ಟೆ ಭಾಗದ ಕರುಳು ಪತ್ತೆಯಾಗಿದ್ದು, ಇದು ಮೃತ ಯುವಕನದ್ದೋ ಅಥವಾ ಪ್ರಾಣಿಯದ್ದೋ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದೆ.
ಇತ್ತೀಚೆಗೆ ಮಂಗಳೂರು ಮೂಲದ 13 ಯುವಕರ ತಂಡ ಕಳಸಕ್ಕೆ ಪ್ರವಾಸ ಬಂದಿದ್ದ ವೇಳೆ ತೀರನ್ ಕೋಟ್ಯಾನ್ ಎಂಬ ಯುವಕ ಅಂಬಾತೀರ್ಥದಲ್ಲಿ ಕಾಲು ಜಾರಿ ನದಿ ಬಿದ್ದಿದ್ದು, 6 ದಿನಕಳೆದರೂ ಯುವಕ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನಿಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞ ಭಾಸ್ಕರ್ ನದಿಯಲ್ಲಿ ಶೋಧ ಮುಂದುವರಿಸಿದ್ದರೂ ತೀರನ್ ಸುಳಿವು ಸಿಕ್ಕಿರಲಿಲ್ಲ. ಆದರೆ, ಮಧ್ಯಾಹ್ನದ ವೇಳೆಗೆ ಕಳಸ ಪಟ್ಟಣ ಸಮೀಪದ ಹೆಬ್ಬಾಳ ಸೇತುವೆ ಬಳಿ ಗಾಳದ ಮೂಲಕ ಮೀನು ಹಿಡಿಯಲು ಹೋಗಿದ್ದ ಸ್ಥಳೀಯರಿಗೆ ನದಿಯಲ್ಲಿ ಕರುಳು ತೇಲುತ್ತಿದ್ದುದನ್ನು ಕಂಡು ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ‘ಯುವಕನ ಕರುಳು ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅದರ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಆದರೆ, ನದಿಯಲ್ಲಿ ತೇಲುತ್ತಿದ್ದ ಕರುಳು ಮನುಷ್ಯರದ್ದೋ, ಪ್ರಾಣಿಗಳದ್ದೋ ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ನದಿಯಲ್ಲಿದ್ದ ಕರುಳು ಮತ್ತಿತರ ಹೊಟ್ಟೆಯ ಭಾಗದ ಅಂಗಾಂಗಗಳು ಗಾತ್ರದಲ್ಲಿ ಮನುಷ್ಯರ ಕರುಳಿಗಿಂತ ದೊಡ್ಡದಿದೆ ಎನ್ನಲಾಗಿದ್ದು, ಈ ಕರುಳು ಮನುಷ್ಯರದ್ದಲ್ಲ ಎಂಬ ಅಭಿಪ್ರಾಯವನ್ನು ಕೆಲ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಯುವಕನಿಗಾಗಿ ಕಳೆದ ಎರಡು ದಿನಗಳಿಂದ ನದಿಯಲ್ಲಿ ಹುಡುಕಾಡುತ್ತಿರುವ ಬಾಳೆಹೊಳೆಯ ಮುಳುಗು ತಜ್ಞ ಭಾಸ್ಕರ್ ಅವರೂ ಕರುಳನ್ನು ಪರಿಶೀಲಿಸಿ ಇದು ಮನುಷ್ಯರ ಕರುಳಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಮಂಗಳವಾರ ಕಳಸದ ಹೆಬ್ಬಾಳೆಯ ಭದ್ರಾ ನದಿಯಲ್ಲಿ ಪತ್ತೆಯಾದ ದೇಹದ ಆಂತರಿಕ ಭಾಗಗಳು ಯುವಕ ತೀರನ್ ಕೋಟ್ಯಾನ್‌ರದ್ದೋ ಅಥವಾ ಪ್ರಾಣಿಯದ್ದೋ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹುಟ್ಟುಹಾಕಿದ್ದು, ವೈದ್ಯರು ಈ ಬಗ್ಗೆ ಪರೀಕ್ಷಿಸಿ ಶಂಕೆಯನ್ನು ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.







