ಚಿಕ್ಕಮಗಳೂರು: ಗಬ್ಗಲ್ ಸೊಸೈಟಿಯಲ್ಲಿ ಅನ್ನಭಾಗ್ಯದ ಅಕ್ಕಿಯ ಕಳ್ಳ ಸಾಗಣೆ; ಆರೋಪ
ಚಿಕ್ಕಮಗಳೂರು, ಜು.31: ಆಹಾರ ವಿತರಣೆ ಕೇಂದ್ರದಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಣೆ ಮಾಡುತ್ತಿದ್ದುದನ್ನು ತಡೆಯಲು ಮುಂದಾದ ಗ್ರಾಪಂ ಸದಸ್ಯರೊಬ್ಬರ ಮೇಲೆ ಮೂವರು ಹಲ್ಲೆ ನಡೆಸಿದ್ದಲ್ಲದೇ 20 ಮೂಟೆ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಗಬ್ಗಲ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಗಬ್ಗಲ್ ಗ್ರಾಪಂ ಸದಸ್ಯ ಕೃಷ್ಣಪ್ಪ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಳೆದ ರವಿವಾರ ಗ್ರಾಮದಲ್ಲಿರುವ ಗಬ್ಗಲ್ ಸೊಸೈಟಿ ಆವರಣದ ಅಕ್ಕಿ ಗೋಡನ್‍ನಿಂದ ಗೂಟ್ಸ್ ಆಟೊವೊಂದಕ್ಕೆ 20 ಚೀಲ ಅನ್ನ ಭಾಗ್ಯದ ಅಕ್ಕಿ ಇದ್ದ ಮೂಟೆಗಳನ್ನು ಲೋಡ್ ಮಾಡಲಾಗುತ್ತಿದ್ದು, ಇದನ್ನು ಕಂಡ ಗ್ರಾಪಂ ಸದಸ್ಯ ಕೃಷ್ಣಪ್ಪ ಸೊಸೈಟಿ ಆಡಳಿತ ಮಂಡಳಿ ಹಾಗೂ ಗುಮಾಸ್ತನನ್ನು ಪ್ರಶ್ನಿಸಿ, ಅಕ್ಕಿಯನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸೂಸೈಟಿ ಗುಮಾಸ್ತ ತಡವರಿಸುತ್ತ ಕೂವೆ ಗ್ರಾಮಕ್ಕೆಂದು ಸುಳ್ಳು ಹೇಳಿದ್ದು, ಬಳಿಕ ಗೂಡ್ಸ್ ವಾಹನದಲ್ಲಿದ್ದ ಮೂವರು ಅಕ್ಕಿಯನ್ನು ಸಾಗಣೆ ಮಾಡಲು ಮುಂದಾದಾಗ ಕೃಷ್ಣಪ್ಪ ವಾಹನ ತಡೆದಿದ್ದಾರೆ.
ಈ ವೇಳೆ ವಾಹನದಲ್ಲಿದ್ದ ಮೂವರು ಅಪರಿಚಿತರು ಏಕಾಏಕಿ ಕೃಷ್ಣಪ್ಪನ ಮೇಲೆ ಹಲ್ಲೆ ಮಾಡಿ ವಾಹನದಲ್ಲಿದ್ದ 20 ಮೂಟೆ ಅಕ್ಕಿಯನ್ನು ಬಾಳೆಹೊನ್ನೂರು ರಸ್ತೆಯಲ್ಲಿ ಕೊಂಡೊಯ್ದಿದ್ದಾರೆ. ಅಕ್ಕಿ ಮೂಟೆಗಳು ಕೂವೆ ಗ್ರಾಮದ ನ್ಯಾಯಬೆಲೆ ಅಂಗಡಿ ತಲುಪಿಯೇ ಇಲ್ಲ. ಅಕ್ಕಿಯನ್ನು ಅಕ್ರಮವಾಗಿ ಬೇರೆಡೆಗೆ ಸಾಗಿಸಲಾಗಿದೆ. ಘಟನೆಯ ಹಿಂದೆ ಸ್ಥಳೀಯ ಪ್ರಭಾವಿಗಳು ಹಾಗೂ ಸೊಸೈಟಿಯ ಪ್ರಭಾವಿಗಳು, ಸಿಬ್ಬಂದಿ ಕೈವಾಡವಿದೆ ಎಂದು ಕೃಷ್ಣಪ್ಪ ಆರೋಪಿಸಿದ್ದಾರೆ.
ಸೋಮವಾರ ಘಟನೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕು ಕಚೇರಿಯ ಆಹಾರ ನಿರೀಕ್ಷಕರು ಗಬ್ಗಲ್ ಸೊಸೈಟಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆನ್ನಲಾಗಿದ್ದು, ಅಕ್ರಮ ಅಕ್ಕಿ ಮೂಟೆಗಳ ಸಾಗಣೆ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಸೊಸೈಟಿಯ ಅವ್ಯವಹಾರಗಳನ್ನು ಮುಚ್ಚಿಹಾಕಲು ಹುನ್ನಾರ ನಡೆಸಿದ್ದಾರೆಂದ ಕೃಷ್ಣಪ್ಪ ಆರೋಪಿಸಿದ್ದಾರೆ.
ಸೊಸೈಟಿಯಿಂದ ಅಕ್ರಮವಾಗಿ 20 ಚೀಲ ಅಕ್ಕಿಯನ್ನು ಸಾಗಿಸಲು ಮುಂದಾದಾಗ ತನ್ನ ಮೇಲೆ ಮೂವರು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ನಾನು ಬಾಳೂರು ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ತನಗೇ ಬೆದರಿಕೆ ಹಾಕುತ್ತಿದ್ದಾರೆ. ಸೊಸೈಟಿ ಅಕ್ರಮದ ಬಗ್ಗೆ ಸ್ಥಳೀಯರೂ ಬೆಂಬಲಕ್ಕೆ ಬರಲಿಲ್ಲ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ತಾನು ರವಿವಾರ ಈ ಬಗ್ಗೆ ಮಾಧ್ಯಮದವರಿಗೆ ತಿಳಿಸಿರಲಿಲ್ಲ. ಸೋಮವಾರ ಆಹಾರ ನಿರೀಕ್ಷಕರು ಬಂದು ಸೊಸೈಟಿಯಲ್ಲಿ ಪರಿಶೀಲಿಸಿ ಹೋಗಿದ್ದಾರೆ. ಆದರೆ ಈ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡದೇ ಅಕ್ರಮ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ, ಸೊಸೈಟಿಯ ಪ್ರಭಾವಿಗಳ ಬಡವರ ಅನ್ನಭಾಗ್ಯದ ಅಕ್ಕಿಯನ್ನು ದಲ್ಲಾಳಿಗಳ ಮೂಲಕ ಮಾರಿಕೊಂಡು ಹಣ ಮಾಡಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಈ ಬಗೆ ತನಿಖೆ ನಡೆಸಬೇಕು.
- ಕೃಷ್ಣಪ್ಪ, ಗಬ್ಗಲ್ ಗ್ರಾಪಂ ಸದಸ್ಯ, ಹಲ್ಲೆಗೊಳಗಾದವರು







